ಗಾಲ್ಫ್ ಪಟುವಿಗೆ ಕೊರೋನಾ ಸೋಂಕು – ಗಾಲ್ಫ್ ಕ್ಲಬ್ ತಾತ್ಕಾಲಿಕ ಸ್ಥಗಿತ
ಬೆಂಗಳೂರು, ಜೂನ್ 24: ಗಾಲ್ಫ್ ಆಟಗಾರರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜೂನ್ 13ರಂದು ಕೆಜಿಎ ಕೋರ್ಸ್ನಲ್ಲಿ ಸೋಂಕಿತ ಗಾಲ್ಪ್ ಆಟಗಾರ ಆಡಿರುವ ಹಿನ್ನಲೆಯಲ್ಲಿ ಕ್ಲಬ್ ಪ್ರದೇಶವನ್ನು ಸಂಪೂರ್ಣವಾಗಿ ಸೋಂಕುರಹಿತವನ್ನಾಗಿ ಮಾಡುವವರೆಗೆ ಕೆಜಿಎ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಗಾಲ್ಫ್ ಸಂಸ್ಥೆಯ ಪದಾಧಿಕಾರಿಯೊಬ್ಬರು ‘ಇಲ್ಲಿ ಆಡುವ ನಮ್ಮ ಸದಸ್ಯರೊಬ್ಬರಿಗೆ ಕೋವಿಡ್ ಸೋಂಕು ಇರುವ ಕುರಿತು ಮಂಗಳವಾರ ಮಾಹಿತಿ ಲಭಿಸಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ನಮ್ಮಲ್ಲಿ ಪ್ರಾರಂಭದಿಂದಲೂ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದು ಸರ್ಕಾರದ ನಿಯಮಗಳಂತೆ ಎಲ್ಲವನ್ನೂ ಪಾಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ಸರ್ಕಾರದ ಎಲ್ಲ ನಿರ್ದೇಶನಗಳನ್ನೂ ನಾವು ಪಾಲಿಸುತ್ತಿದ್ದು, ಸ್ಯಾನಿಟೈಸಿಂಗ್ ಕೆಲಸ ಆರಂಭವಾಗಿದೆ. ಇನ್ನು ಕೆಲವು ದಿನಗಳಲ್ಲಿ ಆ ಕೆಲಸ ಮುಗಿಯುತ್ತದೆ. ಎಲ್ಲ ಆಟಗಾರರ ದಾಖಲೆಗಳನ್ನು ನಿರ್ವಹಣೆ ಮಾಡಿದ್ದು, ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಲ್ಲ ರೀತಿಯಿಂದ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ