ಬೆಂಗಳೂರು: ಕಾಮುಕನೊಬ್ಬ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಮ್ಮ ಮೆಟ್ರೋದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೆಟ್ರೋದಿಂದ ಇಳಿಯುತ್ತಿದ್ದಂತೆ ಯುವತಿಯು (Bengaluru Woman) ಆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ನಂತರ ಆತನನ್ನು ಮೆಟ್ರೋ ಸಿಬ್ಬಂದಿಗೆ ಒಪ್ಪಿಸಿದ್ದಾಳೆ. ಅಲ್ಲದೇ, ನಿನಗೆ ಶಿಕ್ಷೆ ಆಗಲೇಬೇಕು. ಮಾತಾಡಿದ್ರೆ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ ಎನ್ನಲಾಗಿದೆ.
ನಂತರ ಮೆಟ್ರೋ ಅಧಿಕಾರಿಗಳು ಯುವಕನನ್ನು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯುವಕ ತಪ್ಪೊಪ್ಪಿಕೊಂಡ ನಂತರ ಕ್ಷಮೆ ಕೇಳಿಸಿ ಕಳುಹಿಸಿದ್ದಾರೆ. ಈ ಘಟನೆ ನಡೆದ ಒಂದು ವಾರದ ನಂತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿದ್ದ ಯುವಕ ಉತ್ತರ ಭಾರತದ ನಿವಾಸಿ ಎನ್ನಲಾಗಿದೆ. ಈ ವಿಡಿಯೋ ನೋಡಿದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








