ಬಿಜೆಪಿ ಮಣಿಸುವುದಕ್ಕಾಗಿ ಜನ್ಮ ತಾಳಿರುವ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ.
ಕಾಂಗ್ರೆಸ್ ಕೆಲವು ರಾಜ್ಯಗಳಲ್ಲಿ ಸೀಟುಗಳ ಹಂಚಿಕೆ ಕುರಿತು ಮಾತುಕತೆ ನಡೆಸಿದೆ. ಜ. 8ರಂದು ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಸೀಟುಗಳ ಹಂಚಿಕೆ ಕುರಿತು ಆಪ್ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ ಮಾತುಕತೆ ಕಾಂಗ್ರೆಸ್ ಗೆ ಅಷ್ಟೊಂದು ಸುಲಭವಲ್ಲ ಎನ್ನಲಾಗುತ್ತಿದೆ. ಇದರೊಂದಿಗೆ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಕೂಡ ಕಷ್ಟವಾಗಬಹುದು ಎನ್ನಲಾಗುತ್ತಿದೆ.
ಆಸ್ಸಾಂನಲ್ಲಿ ಸ್ಥಳೀಯ ಪಕ್ಷಗಳು, ಬಿಹಾರದ ಆರ್ ಜೆಡಿ ಹಾಗೂ ಜೆಡಿಯು, ಜಾರ್ಖಂಡ್ ನಲ್ಲಿ ಜೆಎಂಎಂ, ತಮಿಳುನಾಡಿನಲ್ಲಿ ಡಿಎಂಕೆ ಜೊತೆ ವಿಧಾನಸಭಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ ಈ ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳೊಂದಿಗೆ ಸೀಟು ಹಂಚಿಕೆಯ ಮಾತುಕತೆ ನಡೆಸುವುದು ಕಾಂಗ್ರೆಸ್ ಗೆ ಸುಲಭವಾಗಬಹುದು. ಆದರೆ, ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.
ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷ ಈಗಾಗಲೇ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದೆ. ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ಥಾನ ಹಂಚಿಕೆ ಮಾಡಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿದ್ದೇ ಇದಕ್ಕೆ ಕಾರಣವಾಗಿತ್ತು. ಮೈತ್ರಿಕೂಟದ ವಿವಿಧ ಹುದ್ದೆಗಳನ್ನು ಶೀಘ್ರದಲ್ಲಿಯೇ ಹಂಚಿಕೆ ಮಾಡಿಕೊಂಡು ಸ್ಥಾನ ಹಂಚಿಕೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದರು. ಈಗ ಅದರ ಭಾಗವಾಗಿ ಚಾಲನೆ ಕೊಟ್ಟಿದ್ದಾರೆ.








