ಕಲಬುರಗಿ: ಮುಖ್ಯ ಶಿಕ್ಷಕಿಯೊಬ್ಬರ ಮೇಲೆ ವಿದ್ಯಾರ್ಥಿಗಳಿಂದ ಮನೆ ಕೆಲಸ ಹಾಗೂ ಟಾಯ್ಲೆಟ್ ಕ್ಲೀನ್ ಮಾಡಿದ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಮೌಲಾನ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೇ ಈ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಯೊಬ್ಬಾತ ಮುಖ್ಯಶಿಕ್ಷಕಿ ಜೋಹರಾ ಜಬೀನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ (Roza Police Station) ಪ್ರಕರಣ ದಾಖಲಾಗಿದೆ.
ಹೊರವಲಯದ ಸೋನಿಯಾ ಗಾಂಧಿ ಕ್ವಾಟರ್ಸ್ ಹತ್ತಿರವಿರುವ ಶಾಲೆಯಲ್ಲಿ ಮುಖ್ಯಶಿಕ್ಷಕಿ ಮಕ್ಕಳಿಂದಲೇ ಶೌಚಾಲಯ ಸ್ವಚ್ಛ ಮಾಡುವುದು, ಕಸ ಗುಡಿಸುವುದು ಹಾಗೂ ತನ್ನ ಮನೆಯ ಕೆಲಸ ಮಾಡಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಯ ಪೋಷಕರೊಬ್ಬರು ಈ ಕುರಿತು ಪ್ರಶ್ನೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ಪೋಷಕರಾದ ಮೊಹಮ್ಮದ್ ಜಮೀರ್, ಶಾಲೆಯ ಮುಖ್ಯಶಿಕ್ಷಕರು ಶಾಲೆ ಮತ್ತು ಮನೆ ಕೆಲಸಗಳಿಗೆ ನನ್ನ ಮಗನನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದೆ ಕೂಡ ಬಳಸಿಕೊಂಡಿದ್ದರು. ಆಗ ಈ ರೀತಿ ಮಾಡಬಾರದು ಎಂದು ಮನವಿ ಮಾಡಿದ್ದೆ. ಆದರೂ ನನ್ನ ಮಗನಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ನನ್ನ ಮಗ ಶಾಲೆ ಮುಗಿಸಿ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ, ಇದರಿಂದ ಅನುಮಾನಗೊಂಡು ಮುಖ್ಯಶಿಕ್ಷಕಿ ಮನೆಗೆ ಹೋಗಿ ನೋಡಿದಾಗ ಅಲ್ಲಿ ಮಗ ಮನೆಗೆಲಸ ಮಾಡುತ್ತಿದ್ದ. ಕೂಡಲೇ ವಿದ್ಯಾರ್ಥಿ ತಂದೆ 112 ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.