ಮಂಗಳೂರು: ಪಾರ್ಕಿಂಗ್ (parking) ವಿಚಾರಕ್ಕೆ ಸಂಬಂಧಪಟ್ಟಂತೆ ಸಹೋದರರಿಬ್ಬರ ಮೇಲೆ 8 ಜನರು ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ನಗರದ ರಾವ್ ಆಂಡ್ ರಾವ್ ಸರ್ಕಲ್ ಹತ್ತಿರ ನಡೆದಿದ್ದು, ಸಹೋದರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಫಾರೂಕ್ ಹಾಗೂ ಇನ್ನಿತರ 8 ಜನರು ಸೇರಿಕೊಂಡು ಉಲ್ಲಾಸ್ ರಾವ್, ಹರ್ಷಿತ್ ರಾವ್ ಸಹೋದರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಹೋದರರು ಇಲ್ಲಿನ ಎಂಪಾಯರ್ ಹೊಟೇಲ್ ಗೆ ಊಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕನ ತಮ್ಮ ಹಾಗೂ ಇನ್ನಿತರರು ಹಲ್ಲೆ ನಡೆಸಿದ್ದಾರೆ. ಸಹೋದರರ ತಲೆಗೆ, ತುಟಿಗೆ ಗಾಯಗಳಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.