ಬೆಂಗಳೂರು: ‘ಕೊರೋನಾ ವಿಚಾರದಲ್ಲಿ ಬಡವರು, ಶ್ರೀಮಂತರು, ಅಧಿಕಾರಿಗಳು, ಸಾಮಾನ್ಯ ಜನರು ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಸಮಾನವಾಗಿ ಉಚಿತ ಚಿಕಿತ್ಸೆ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ರಾಜ್ಯದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬ ದೃಷ್ಟಿಯಿಂದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ತಂದಿದೆ. ಇವೆಲ್ಲ ಇದ್ದರೂ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಸರ್ಕಾರ ಶಿಫಾರಸ್ಸು ಮಾಡುವ ಸೋಂಕಿತರಿಗೆ ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 8500, ವೆಂಟಿಲೇಟರ್ ಇರುವ ವಾರ್ಡ್ ಗೆ 10 ಸಾವಿರ ಜತೆಗೆ ವೈಯಕ್ತಿಕ ವಾರ್ಡ್ ಗೆ ಶೇ.25 ರಷ್ಟು ಹೆಚ್ಚುವರಿ ಶುಲ್ಕ ನಿಗದಿಪಡಿಸಿದೆ. ಇನ್ನು ಖಾಸಗಿ ಆಸ್ಪತ್ರೆಗೆ ನೇರ ದಾಖಲಾಗುವ ರೋಗಿಗಳಿಗೆ 25 ಸಾವಿರ ನಿಗದಿ ಮಾಡಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜನ ಈ ಹಣವನ್ನು ಎಲ್ಲಿಂದ ತರಬೇಕು? ಸರಕಾರ ಅವರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ.
ಕೋವಿಡ್ ವಿಚಾರದಲ್ಲಿ ಸರ್ಕಾರ ಯಾವ ಕಾರಣಕ್ಕೆ ಬಡವರು, ಶ್ರೀಮಂತರು ಎಂಬ ಬೇಧ ಭಾವ ಮಾಡುತ್ತಿದೆಯೋ ಗೊತ್ತಿಲ್ಲ. ಬಡವರೇನಾದರೂ ಈ ರೋಗ ತಂದಿದ್ದರಾ? ಅವರಿಗೇಕೆ ಶಿಕ್ಷೆ?ಹೊರ ದೇಶಗಳಿಂದ ಬಂದವರನ್ನು ಸರಿಯಾಗಿ ನಿಯಂತ್ರಿಸದೆ, ತನ್ನ ವೈಫಲ್ಯಗಳಿಂದ ಜನರಿಗೆ ಸೋಂಕು ಹರಡಿರುವ ಸರಕಾರವೇ ಈಗ ಪ್ರತಿಯೊಬ್ಬ ಸೋಂಕಿತರಿಗೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.
ದೇಶದ ಜನರು, ಉದ್ಯಮಿಗಳು, ಕೈಗಾರಿಕೆಗಳು, ಸಂಸದರು ಪಿಎಂ ಕೇರ್ ನಿಧಿಗೆ ಹಣ ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಸರ್ಕಾರದ ಬಳಿ ಹಣ ಇದೆ. ಹೀಗಾಗಿ ಅವರ ತಪ್ಪಿನಿಂದ ಹಬ್ಬಿರುವ ಸೋಂಕಿಗೆ ಅವರೇ ಉಚಿತ ಚಿಕಿತ್ಸೆ ನೀಡಲಿ.
ಕುಮಾರಕೃಪಾ ಅತಿಥಿ ಗೃಹದಲ್ಲಿ ಜನಪ್ರತಿನಿಧಿಗಳು, ಹಿರಿಯವಾಧಿಕಾರಿಗಳಿಗೆ ವಿಶೇಷ ಚಿಕಿತ್ಸೆ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಾಮಾನ್ಯ ಜನರಿಗೂ ಅವರಂತೆಯೇ ವ್ಯವಸ್ಥೆ ಕಲ್ಪಿಸಬೇಕು.