ಹಾಸನ: ಬಸ್ ನ ಆಕ್ಸಲ್ ತುಂಡಾದ ಪರಿಣಾಮ ಶಾಲೆಯ ಕಂಪೌಂಡ್ ಹಾಗೂ ಮನೆಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಹತ್ತಿರ ನಡೆದಿದೆ.
ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಉದಯಪುರ ಗ್ರಾಮದ ಅಮೃತ್‌ರಾಜ್ (34) ಸಾವನ್ನಪ್ಪಿದ ದುರ್ದೈವಿ. ಅಲ್ಲದೇ, ಈ ಘಟನೆಯಲ್ಲಿ ಸುಮಾರು 10ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಬಾಗೆ ಗ್ರಾಮ ತಲುಪುತ್ತಿದ್ದಂತೆ ಆಕ್ಸಲ್ ತುಂಡಾದ ಪರಿಣಾಮ ರಸ್ತೆ ಪಕ್ಕದ ಜಮೀನಿಗೆ ನುಗ್ಗಿ ಮನೆಗೆ ಡಿಕ್ಕೆ ಹೊಡೆದಿದೆ. ಅಲ್ಲದೇ, ಪಕ್ಕದಲ್ಲಿದ್ದ ಶಾಲೆಯ ಕಂಪೌಂಡ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕ ಅಮೃತ್‌ರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.








