ಅವಧಿಗೂ ಮುನ್ನ ನಿವೃತ್ತಿಗೆ ಚಿಂತನೆ ನಡೆಸಿದ ಟಿಎಸ್ ಪಿಎಯ ನಿರ್ದೇಶಕ ವಿ.ಕೆ ಸಿಂಗ್
ಹೈದರಾಬಾದ್, ಜೂನ್ 26: ತೆಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿ (ಟಿಎಸ್ ಪಿಎ)ಯ ನಿರ್ದೇಶಕ ವಿ.ಕೆ ಸಿಂಗ್ ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ನಾನು ಪೊಲೀಸ್ ಇಲಾಖೆಗೆ ಸೇರುವಾಗ ಹಲವಾರು ಕನಸುಗಳನ್ನು ಹೊತ್ತಿದ್ದೆ. ಆದರೆ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕೆಂಬ ಕನಸು ನನಸು ಮಾಡಲಾಗದೆ ನಾನು ವಿಫಲನಾಗಿದ್ದೇನೆ. ಹೀಗಾಗಿ ಅವಧಿಗೂ ಮುನ್ನವೇ ನಿವೃತ್ತಿಗೆ ಅನುಮತಿ ನೀಡಬೇಕೆಂದು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
2020 ರ ಅಕ್ಟೋಬರ್ 2 ರಂದು ನಿವೃತ್ತಿಗೆ ಅನುಮತಿ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ವರ್ಷದ ನವೆಂಬರ್ ತಿಂಗಳಲ್ಲಿ ನಿವೃತ್ತರಾಗಬೇಕಿದ್ದ ವಿ.ಕೆ ಸಿಂಗ್ 1987 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದರು. ಆದರೆ ತಾವು ಅವಧಿಗೂ ಮೊದಲೇ ನಿವೃತ್ತಿಯನ್ನು ಬಯಸಿದ್ದು, ಗೃಹ ಇಲಾಖೆಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ನಿವೃತ್ತರಾದರೆ ತಮ್ಮ ಸೇವೆ ಜನರ ನಡುವೆ ಬದಲಾವಣೆ, ಸುಧಾರಣೆ ತರಲು ಬಳಕೆಯಾಗಬಹುದೆಂಬ ಅಭಿಪ್ರಾಯ ಸಿಂಗ್ ಅವರದಾಗಿದ್ದು, ಈ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯಾದ ಅಕ್ಟೋಬರ್ 2 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಬಯಸಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ತೆಲಂಗಾಣ ಸರ್ಕಾರವೂ ನನ್ನ ಸೇವೆಗಳಿಂದ ಸಂತುಷ್ಟವಾಗಿಲ್ಲ. ನನ್ನ ಸಲಹೆಗಳೂ ಸರ್ಕಾರದ ಸೇವೆಗಳ ವ್ಯವಸ್ಥೆಯಲ್ಲಿ ಹೆಚ್ಚು ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಸರ್ಕಾರಕ್ಕೆ ನಾನು ಹೊರೆಯಾಗಬಾರದೆಂದು ನಿರ್ಧರಿಸಿ ನಿವೃತ್ತಿ ಬಯಸಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ನನ್ನ ನಿರ್ಧಾರವು ಸರ್ಕಾರದ ವಿರುದ್ಧವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ ಸಿಂಗ್, ಯಾರಾದರೂ ಸರ್ಕಾರಿ ಸೇವೆ ಮಾಡಬೇಕೆಂದು ಬಯಸಿದರೆ ನಾನು ಪೊಲೀಸ್ ಸೇವೆಗೆ ಸೇರಿ ಎಂದೇ ಹೇಳುತ್ತೇನೆ ಎಂದು ಹೇಳಿದರು. ಸ್ಪಷ್ಟ ನ್ಯಾಯದ ಕಲ್ಪನೆ, ಸ್ಪಷ್ಟ ಆತ್ಮಸಾಕ್ಷಿಯೊಂದಿಗೆ ಕೆಲಸ ಮಾಡಿದರೆ ಪೊಲೀಸ್ ವೃತ್ತಿ ಅತ್ಯುತ್ತಮವಾದ್ದು ಎಂದು ಅವರು ಹೇಳಿದರು.