ನವದೆಹಲಿ: ಹಲವು ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈತರು ದೆಹಲಿ ಚಲೋ ಪ್ರತಿಭಟನೆ ಆರಂಭಿಸಿದ್ದು, ರಾಷ್ಟ್ರ ರಾಜಧಾನಿ ತೆರಳದಂತೆ ತಡೆಯುವುದಕ್ಕಾಗಿ ಹರಿಯಾಣ ಪೊಲೀಸರು ಅಶ್ರವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದು, ಲಘು ಲಾಠಿ ಪ್ರಹಾರ ಕೂಡಾ ನಡೆಸಲಾಗಿದೆ. ಇದನ್ನು ಖಂಡಿಸಿ ದೇಶಾದ್ಯಾಂತ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, ರೈತರ ಮೇಲೆ ನಡೆಸಿರುವ ಪೈಶಾಚಿಕ ದೌರ್ಜನ್ಯ ಖಂಡಿಸಲು ದೇಶದಾದ್ಯಂತ ಪ್ರತಿಭಟಿಸಿ ಗ್ರಾಮೀಣ ಮಟ್ಟದಲ್ಲಿ ರಸ್ತೆ ಬಂದ್ ಮಾಡಲು ತಿರ್ಮಾನಿಸಲಾಗಿದೆ. ರಾಜ್ಯಾದ್ಯಂತ ಶುಕ್ರವಾರ ಬೆಳಿಗ್ಗೆ 11 ರಿಂದ 1ರ ವರೆಗೂ ರಸ್ತೆ ಬಂದ್ ಚಳುವಳಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ರೈತರು ಶಾಂತಿಯಿಂದ ಹೋರಾಟ ಮಾಡಲು ಮುಂದಾದರೂ ದಾಳಿ ಮಾಡಲು ಪೊಲೀಸರು ಮತ್ತು ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದು ಸರ್ಕಾರ ರೈತರ ಆಂದೋಲನ ದಮನ ಮಾಡುವ ಕಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








