ಕೊಡಗು: ತೆರಿಕೆ ಕಟ್ಟಲು ಜನರಿಗೆ ತಿಳುವಳಿಕೆ ಮೂಡಿಸಿ ಸರ್ಕಾರದೊಂದಿಗೆ ಕೈ ಜೋಡಿಸಬೇಕಾಗಿದ್ದ ಗ್ರಾಪಂ ತೆರಿಗೆ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗ್ರಾಪಂ ಜಿಎಸ್ಟಿ ಜಾರಿಯಾದಾಗಿನಿಂದಲೂ ಇಲ್ಲಿಯವರೆಗೆ ಒಂದು ಪೈಸೆ ತೆರಿಗೆ ಕಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ ಇಲ್ಲಿಯವರೆಗೆ ಬರೋಬ್ಬರಿ 36 ಲಕ್ಷ ರೂ. ಜಿಎಸ್ಟಿ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಎಸ್ಟಿ ಕಚೇರಿಯಿಂದ ಪಂಚಾಯಿತಿಗೆ ನೊಟೀಸ್ ನೀಡಲಾಗಿದೆ. ಫೆಬ್ರವರಿ 8 ರಂದು ಜಿಎಸ್ಟಿ ಕಟ್ಟಲು ಕೊನೆಯ ಗಡುವು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಸದ್ಯ ಜಿಎಸ್ಟಿ 36 ಲಕ್ಷ ತೆರಿಗೆ ಸೇರಿ ಬಡ್ಡಿ ಸೇರಿದಂತೆ ದುಪ್ಪಟ್ಟು ಹಣವನ್ನು ಪಂಚಾಯಿತಿ ಕಟ್ಟಬೇಕಾಗಿದೆ. ಇದನ್ನು ಪಾವತಿಸುವುದಕ್ಕಾಗಿ ಪಂಚಾಯಿತಿ ತನ್ನ ವ್ಯಾಪ್ತಿಯ ವ್ಯಾಪಾರಸ್ಥರು, ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿದೆ ಎನ್ನಲಾಗಿದೆ.








