ಬೆAಗಳೂರು: ಕೊರೊನಾ ಮಹಾಮಾರಿ ರಾಜ್ಯಾದ್ಯಂತ ರಾಕೆಟ್‌ನಂತೆ ಮುನ್ನುಗ್ಗುತ್ತಿದ್ದು, ಇದೇ ಮೊದಲ ಬಾರಿಗೆ ರಾಜ್ಯದ ಮೊದಲ ಕೊರೊನಾ ವಾರಿಯರ್ ವೈದ್ಯನನ್ನು ಬಲಿ ಪಡೆದಿದೆ.
ಬಾಗಲಕೋಟೆಯ ಕಲಾದಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 30ರ ಹರೆಯದ ವೈದ್ಯರಿಗೆ ವಾರದ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು.
ಮೊದಲೇ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ವೈದ್ಯರಿಗೆ ಕೊರೊನಾ ಪಾಸಿಟಿವ್ ಬರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಕೂಡಲೇ ವೈದ್ಯರನ್ನು ಬಾಗಲಕೋಟೆಯಿಂದ ಬೆಂಗಳೂರಿಗೆ ರವಾನಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ವೈದ್ಯ ಮೃತಪಟ್ಟಿದ್ದಾರೆ.
ವೈದ್ಯ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ಖಚಿತಪಡಿಸಿದ್ದಾರೆ.
ಕುಟುಂಬಕ್ಕೆ 50 ಲಕ್ಷ ಪರಿಹಾರ
ಕೊರೊನಾದಿಂದ ಮೃತಪಟ್ಟ ವೈದ್ಯರ ಕುಟುಂಬಕ್ಕೆ ಕೊರೊನಾ ವಾರಿಯರ್ ವಿಮಾ ನಿಧಿಯಿಂದ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಯುವ ವೈದ್ಯನನ್ನು ಕಳೆದುಕೊಂಡಿದ್ದೇವೆ
ಗ್ರಾಮೀಣ ಪ್ರದೇಶದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಯುವ ಉತ್ಸಾಹಿ ವೈದ್ಯನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ್ ದೇಸಾಯಿ ಸಂತಾಪ ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ 30ಕ್ಕೂ ಹೆಚ್ಚು ವೈದ್ಯರು ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಲ್ಲೂ ವೈದ್ಯರು ಇದೇ ರೀತಿ ಆತಂಕದಲ್ಲಿ ಕೆಲಸ ಮಾಡಬೇಕಾಗಿದೆ. ಸರ್ಕಾರಗಳು ಕೊರೊನಾ ವಾರಿಯರ್ಸ್ಗಳ ರಕ್ಷಣೆಗೆ ಮುಂದಾಗಬೇಕು. ಇಲ್ಲದೇ ಹೋದರೆ, ಕೊರೊನಾ ವಾರಿಯರ್ಸ್ಗಳಲ್ಲಿ ಆತ್ಮವಿಶ್ವಾಸ ಕುಗ್ಗಿಹೋಗಿ ಚಿಕಿತ್ಸೆ ನೀಡಲು ಹಿಂದೇಟು ಹಾಕುವ ಸ್ಥಿತಿ ಬರಬಹುದು ಎಂದು ವೈದ್ಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.