ಹೊಸದಿಲ್ಲಿ, ಜೂನ್ 26: ಕಾನ್ಪುರ್ ಆಶ್ರಯ ಮನೆಯ ಕುರಿತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ದಾರಿತಪ್ಪಿಸುವ ಟೀಕೆಗಳ ಬಗ್ಗೆ ಉತ್ತರ ಪ್ರದೇಶದ ಮಕ್ಕಳ ಹಕ್ಕುಗಳ ಸಮಿತಿ ನೋಟಿಸ್ ಜಾರಿಗೊಳಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ನಾನು ಇಂದಿರಾಗಾಂಧಿ ಅವರ ಮೊಮ್ಮಗಳು, ಅದೇನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದು, ಅದರಲ್ಲೂ ಸರ್ಕಾರದ ಬಾಲ ಮಂದಿರದಲ್ಲಿರುವ 57 ಬಾಲಕಿಯರು ಕೊರೊನಾ ಸೋಂಕಿಗೆ ತುತ್ತಾಗಿರುವುದು ಮತ್ತು ಅದರಲ್ಲಿ ಇಬ್ಬರು ಗರ್ಭಿಣಿ ಹಾಗೂ ಒಬ್ಬಾಕೆಗೆ ಏಡ್ಸ್ ಸೋಂಕು ತಗುಲಿರುವುದನ್ನು ಪ್ರಸ್ತಾಪಿಸಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾನುವಾರ ಪೋಸ್ಟ್ ಹಾಕಿದ್ದರು. ಅಷ್ಟೇ ಅಲ್ಲ ಈ ಘಟನೆಯನ್ನು ಬಿಹಾರದ ಮುಜಾಫರ್ ನಗರದ ಬಾಲಮಂದಿರದ ಘಟನೆಗೆ ಹೋಲಿಕೆ ಮಾಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದ್ದು, ಬಾಲಮಂದಿರದ ಮಕ್ಕಳ ಕುರಿತು ತಪ್ಪು ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಮೂರು ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು.
ಆ ನೋಟಿಸ್ ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಸರಣಿ ಟ್ವೀಟ್‌ಗಳಲ್ಲಿ, ” ಜನಸೇವಕಿಯಾಗಿ ಯುಪಿ ಜನರಿಗೆ ಸತ್ಯ ತಿಳಿಸುವುದು ನನ್ನ ಕರ್ತವ್ಯ ಆಗಿದೆ, ಮತ್ತು ನಾನು ಸತ್ಯವನ್ನು ಜನರ ಮುಂದೆ ಇಡಲು ಸದಾ ಪ್ರಯತ್ನಿಸುವೆ. ಮತ್ತು ಸರ್ಕಾರದ ಪ್ರಚಾರ ಮಾಡುವುದು ನನ್ನ ಕರ್ತವ್ಯ ಅಲ್ಲ. ಯುಪಿ ಸರ್ಕಾರ ನನಗೆ ಬೆದರಿಕೆ ಹಾಕುವ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ …ನನ್ನ ವಿರುದ್ಧ ಅದೇನು ಕ್ರಮ ಕೈಗೊಳ್ಳುತ್ತಿರೋ ಅದನ್ನು ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.








