ಹಾಸನ : ಕೊರೊನಾ ವೈರಸ್ ಹೆಸರಿನಲ್ಲಿ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ, ಹಾಸನ ಜಿಲ್ಲೆಯ ಜನರು ದಂಗೆ ಎದ್ದರೆ ಈ ಬಿಜೆಪಿ ಸರ್ಕಾರ ಉಳಿಯಲ್ಲ ಎಂದು ಸರ್ಕಾರಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.
ಹಾಸನದಲ್ಲಿ ಮಾತನಾಡಿದ ಹೆಚ್.ಡಿ ರೇವಣ್ಣ, ಪಬ್ಲಿಕ್ ಹೌಸಿಂಗ್ ಕಮಿಟಿ ಚೇರ್ಮನ್ ಭೇಟಿ ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ. ಹಾಸನ ಜಿಲ್ಲೆಯ ಜನರು ದಂಗೆ ಎದ್ದರೆ ಈ ಬಿಜೆಪಿ ಸರ್ಕಾರ ಉಳಿಯಲ್ಲ. ಜಿಲ್ಲೆಯ ಜನರ ಶಾಪ ಸರ್ಕಾರಕ್ಕೆ ಒಳ್ಳೆಯದಾಗಲ್ಲ ಎಂದು ಆಕ್ರೋಶ ಹೊರಹಾಕಿದರು.
ಇನ್ನು ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಳಿಯ ಎಂಜಿನಿಯರ್ ಅವರನ್ನು ಹುಬ್ಬಳಿಯಲ್ಲೇ ಮುಂದುವರಿಸಿದ್ದೆ, ಜೊತೆಗೆ ಬಡ್ತಿಯನ್ನೂ ಕೊಡಿಸಿದ್ದೆ. ಆದರೆ ಈಗ ಸಿಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೇವಣ್ಣ, ಸಿಎಂ ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರು ಏನ್ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರಾ. ಬಿಜೆಪಿ ಲೂಟಿಕೋರರ ಸರ್ಕಾರವಾಗಿದೆ ಎಂದು ಗುಡುಗಿದರು.