ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಿದ್ದು, ಯಾರ ಸಹಾಯವೂ ಇಲ್ಲದೆ ಕಾಲಿನಿಂದ ಪರೀಕ್ಷೆ ಬರೆದ ಬಂಟ್ವಾಳದ ವಿದ್ಯಾರ್ಥಿಯ ಸಾಹಸಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂದು ಸುರೇಶ್ ಕುಮಾರ್ ಟ್ವಿಟರ್‍ನಲ್ಲಿ ಬಾಲಕನ ಫೋಟೋ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.
ಎರಡನೇ ದಿನವೂ ಪರೀಕ್ಷೆ ಸುಸೂತ್ರ
ಎರಡನೇ ದಿನದ ಜೆಟಿಎಸ್ ಮತ್ತು ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಇಂದು ಸುಸೂತ್ರವಾಗಿ ನಡೆದಿದೆ. ರಾಜ್ಯದ 94 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, 510 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಯಾವುದೇ ಕೇಂದ್ರದಲ್ಲೂ ಪರೀಕ್ಷಾ ಅವ್ಯವಹಾರ ನಡೆದಿಲ್ಲ. ರಾಜ್ಯದ ವಿವಿಧೆಡೆಯ ಪರೀಕ್ಷಾ ಕೇಂದ್ರಗಳಲ್ಲಿ ನಿನ್ನೆ ಕೈಗೊಳ್ಳಲಾದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ಶನಿವಾರ ಗಣಿತ ಪರೀಕ್ಷೆ ನಡೆಯಲಿದ್ದು, ನಿನ್ನೆಯಂತೆಯೇ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಂತರ ಪಾಲಿಸುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಡೆಯುತ್ತಿರುವ ಪರೀಕ್ಷೆಯ ಯಶಸ್ಸಿಗೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕೆಂದು ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.