ಅಪಘಾತದಲ್ಲಿ ತನ್ನ ಎರಡೂ ಕೈ ಕಳೆದುಕೊಂಡಿದ್ದ ದೆಹಲಿಯ ಪೇಂಟರ್ ಗೆ ಮಹಿಳೆಯೊಬ್ಬರ ಕೈ ಗಳನ್ನು ಜೋಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ 11 ವೈದ್ಯರ ತಂಡ ಸುಮಾರು 12 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ, ಕೈಗಳನ್ನು ಜೋಡಿಸಿದ್ದಾರೆ. ವಿಶ್ವದಲ್ಲಿಯೇ ಇಂತಹ ಶಸ್ತ್ರಚಿಕಿತ್ಸೆ ಇದೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗಿದೆ. 45 ವರ್ಷದ ರಾಜ್ ಕುಮಾರ್ ತಮ್ಮ ಸೈಕಲ್ ನಲ್ಲಿ ಹೊರಟ ಸಂದರ್ಭದಲ್ಲಿ ನಂಗ್ಲೋಯ್ನಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ರೈಲಿಗೆ ಸಿಲುಕಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು.
ಈಗ ಮೆದುಳು ನಿಷ್ಕ್ರೀಯಗೊಂಡು ಸಾವನ್ನಪ್ಪಿದ್ದ ಮಹಿಳೆಯ ಕೈಗಳನ್ನು ಅವರಿಗೆ ವೈದ್ಯರು ಜೋಡಿಸಿದ್ದಾರೆ.
ಮೂಳೆಗಳು, ಅಪಧಮನಿಗಳು, ನಾಳಗಳು, ಸ್ನಾಯುರಜ್ಜುಗಳು, ಸ್ನಾಯುಗಳು, ನರಗಳು ಮತ್ತು ಚರ್ಮ ಸೇರಿದಂತೆ ಇನ್ನಿತರ ಘಟಕಗಳನ್ನು ವೈದ್ಯರು ಸೂಕ್ಷ್ಮವಾಗಿ ಮರು ಜೋಡಿಸಿದ್ದಾರೆ. ಸದ್ಯ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.