ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಇನ್ನೊಂದೆಡೆ ದಕ್ಷಿಣದಲ್ಲಿ ಬಿಜೆಪಿ ತನ್ನ ಕೋಟೆ ಬಲಪಡಿಸಲು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ನಿರತವಾಗಿವೆ. ಸದ್ಯ ಬಿಜೆಪಿಯು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ(ಟಿಡಿಪಿ)ಮತ್ತು ಪವನ್ ಕಲ್ಯಾಣ್ ರ ಜನಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ಎದುರಿಸಲು ಈ ಮೈತ್ರಿ ನಿರ್ಧರಿಸಿವೆ.
ಮೂರು ಪಕ್ಷಗಳ ನಡುವೆ ಸೀಟು ಹಂಚಿಕೆ ಸೂತ್ರಕ್ಕೆ ಒಪ್ಪಿಗೆ ದೊರೆತಿದ್ದು, ಆಂಧ್ರಪ್ರದೇಶದಲ್ಲಿ ಟಿಡಿಪಿ 17 ಕ್ಷೇತ್ರಗಳಲ್ಲಿ,ಮ ಬಿಜೆಪಿ 6ಸ್ಥಾನಗಳಲ್ಲಿ, ಪವನ್ ಕಲ್ಯಾಣ್ ಅವರ ಜನಸೇನೆ 2 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 144, ಬಿಜೆಪಿ 10 ಹಾಗೂ ಜೆಎಸ್ಪಿ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಟಿಡಿಪಿ ಹಾಗೂ ಬಿಜೆಪಿ ಮಧ್ಯೆ 1996ರಲ್ಲಿ ಮೈತ್ರಿಯಾಗಿತ್ತು. ಆಗ ಟಿಡಿಪಿ ಎನ್ಡಿಎ ಸೇರಿತ್ತು. 2014ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರೆ, 2014ರ ಚುನಾವಣೆಯಲ್ಲಿ ಜೆಎಸ್ಪಿ ಬಿಜೆಪಿಗೆ ಬೆಂಬಲ ನೀಡಿತ್ತು.