ಮುಂಬೈ: ನಗರದ ಘಾಟ್ ಕೋಪರ್ ನಲ್ಲಿ ಬೃಹತ್ ಬಿರುಗಾಳಿ ಬೀಸಿದ್ದರ ಪರಿಣಾಮ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್ ಬಂಕ್ ಮೇಲೆ ಬಿದ್ದು 8 ಜನ ಸಾವನ್ನಪ್ಪಿದ್ದಾರೆ.
ಅವಶೇಷಗಳ ಅಡಿಯಲ್ಲಿ 20 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 59 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೆಟ್ರೋಲ್ ಬಂಕ್ (Petrol Bunk) ಎದುರಗಡೆ ಬೃಹತ್ ಜಾಹೀರಾತು ಫಲಕ ಅಳವಡಿಸಲಾಗಿತ್ತು. ಕಬ್ಬಿಣದ ಬಿಲ್ ಬೋರ್ಡ್ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಕಾರುಗಳ ಮೇಲೆ ಬಿದ್ದಿದೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸ್ಥಳಕ್ಕೆ ಆಗಮಿಸಿ ಅವಶೇಷಗಳಡಿ ಸಿಲುಕಿರುವ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಜನರನ್ನು ರಕ್ಷಿಸಲು ಆದ್ಯತೆ ನೀಡಲಾಗಿದ್ದು ಗಾಯಗೊಂಡವರಿಗೆ ಸರ್ಕಾರ ಚಿಕಿತ್ಸೆ ನೀಡಲಿದೆ. ಮೃತ ಕುಟುಂಬದ ಸದಸ್ಯಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಂಬೈನಲ್ಲಿರುವ ಎಲ್ಲಾ ಹೋರ್ಡಿಂಗ್ಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.