ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್.ಐ.ಆರ್ ಗಳಿಗೆ ತಡೆ
ಮುಂಬೈ, ಜುಲೈ1: ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಮಂಗಳವಾರ ಬಾಂಬೆ ಹೈಕೋರ್ಟ್ ಬಂಧನದಿಂದ ತಡೆ ನೀಡಿದೆ. ಪಾಲ್ಘರ್ ಲಿಂಚಿಂಗ್ ಪ್ರಕರಣ ಮತ್ತು ಬಾಂದ್ರಾ ನಿಲ್ದಾಣದ ಹೊರಗೆ ವಲಸಿಗರು ಜಮಾಯಿಸಿದ ಘಟನೆಗೆ ಕೋಮು ಬಣ್ಣಹಚ್ಚುವ ಆರೋಪಗಳಿಗಾಗಿ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗಳನ್ನು ಹೈಕೋರ್ಟ್ ಅಮಾನತುಗೊಳಿಸಿದೆ.
ಸಾರ್ವಜನಿಕ ಚರ್ಚೆಯನ್ನು ನಡೆಸುವಾಗ ಪತ್ರಕರ್ತನ ಮೇಲೆ ಕೋಮು ಬಣ್ಣದ ಆರೋಪ ಹೊರಿಸಲು ಸಾಧ್ಯವಿಲ್ಲ, ಅರ್ನಬ್ ಗೋಸ್ವಾಮಿ ವಿರುದ್ಧ ಮೇಲ್ನೋಟಕ್ಕೆ ಅಂತಹ ಆರೋಪದ ಪ್ರಕರಣಗಳು ಕಂಡುಬರುತ್ತಿಲ್ಲ ಎಂದು ನ್ಯಾ.ಉಜ್ಜಲ್ ಭುಯಾನ್, ನ್ಯಾ.ರಿಯಾಜ್ ಚಗ್ಲಾ ಹೇಳಿದರು. ಹಿರಿಯ ಅಡ್ವೊಕೇಟ್ ಗಳಾದ ಹರೀಶ್ ಸಾಳ್ವೆ ಹಾಗೂ ಮಿಲಿಂದ್ ಸಾಥೆ, ಗೋಸ್ವಾಮಿ ಪರ ವಾದ ಮಂಡಿಸಿ ತಮ್ಮ ಕಕ್ಷಿದಾರರ ವಿರುದ್ಧ ಹಾಕಲಾಗಿರುವ ಎಫ್‌ಐಆರ್ ರಾಜಕೀಯ ಪ್ರೇರಿತ ಎಂದು ವಾದಿಸಿದ್ದರು.
ರಿಪಬ್ಲಿಕ್ ಚಾನಲ್ ನಲ್ಲಿ ಪ್ರಸಾರವಾಗಿದ್ದ ಪಾಲ್ಘರ್ ಗುಂಪು ಹತ್ಯೆ ಸಂಬಂಧ ಕಾರ್ಯಕ್ರಮದ ವಿರುದ್ಧ ಎಫ್‌ಐಆರ್ ರದ್ದುಗೊಳಿಸುವುದಕ್ಕೆ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಆದರೆ ಒಂದಕ್ಕಿಂತ ಹೆಚ್ಚು ಎಫ್.ಐ.ಆರ್ ಗಳನ್ನು ದಾಖಲಿಸುವುದಕ್ಕೆ ತಡೆ ನೀಡಿತ್ತು ಮತ್ತು ಇದರಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿತ್ತು.
ಮಾಧ್ಯಮ ಸಂಸ್ಥೆ ಗಳು ಒಂದೇ ನಿಲುವು ಹೊಂದಿದ್ದರೆ ಮುಕ್ತ ಪ್ರಜಾಪ್ರಭುತ್ವ ಉಳಿಯುವುದಕ್ಕೆ ಸಾಧ್ಯವಿಲ್ಲ. ಪತ್ರಕರ್ತರ ಸ್ವಾತಂತ್ರ್ಯವೂ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಲ್ಲಿ ಅಡಕವಾಗಿದ್ದು, ಪತ್ರಕರ್ತರಿಗೆ ವಾಕ್ ಸ್ವಾತಂತ್ರ್ಯ ಇರುವವರೆಗೆ ಭಾರತದ ಸ್ವಾತಂತ್ರ್ಯ ವೂ ಸುರಕ್ಷಿತವಾಗಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.