ಬೆಂಗಳೂರು : ಇಂದು ಪತ್ರಿಕಾ ದಿನದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಆರ್. ಅಶೋಕ್, ಡಿಸಿಎಂ ಅಶ್ವಥ್ ನಾರಾಯಣ್ ಅವರು ಪತ್ರಕರ್ತರಿಗೆ ಶುಭಾಶಯ ಕೋರಿದ್ದಾರೆ.
ಸಿಎಂ ಬಿಎಸ್ ವೈ ತಮ್ಮ ಟ್ವೀಟ್ ನಲ್ಲಿ.. ಸಮಾಜ ಕಟ್ಟುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಮಾಧ್ಯಮಗಳನ್ನು ಮುನ್ನೆಡೆಸುವ ಎಲ್ಲಾ ಪತ್ರಕರ್ತ ಬಂಧುಗಳಿಗೆ ಪತ್ರಿಕಾ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾದ ಜುಲೈ ಒಂದರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಪತ್ರಕರ್ತರು ರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗ, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ಇಂತಹ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಪತ್ರಕರ್ತ ಪರಿವಾರಕ್ಕೆ ಮತ್ತೊಮ್ಮೆ ಶುಭಾಶಯಗಳು ಎಂದಿದ್ದಾರೆ.
ಶ್ರೀ ರಾಮುಲು ಟ್ವೀಟ್ ನಲ್ಲಿ, ಎಲ್ಲಾ ಪತ್ರಕರ್ತ ಬಂಧುಗಳಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುವ ಮಾಧ್ಯಮಗಳನ್ನು ಮುನ್ನೆಡೆಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲರಿಗೂ ಪತ್ರಿಕಾ ದಿನಾಚರಣೆಯ ವೇಳೆಯಲ್ಲಿ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಜನರಲ್ಲಿ ತಾವು ಮೂಡಿಸಿದ ಜಾಗೃತಿ, ಅರಿವು ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಿದೆ. ಸರಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿ, ಸಮಾಜದ ಅಂಕುಡೊಂಕುಗಳ ಚಿಕಿತ್ಸಕರಾಗಿ ದುಡಿಯುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.