ನವದೆಹಲಿ : ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ -ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಹಿನ್ನೆಲೆ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಅಭಿಯಾನ ಆರಂಭವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ ಕಟ್ ಚೀನಾ ಅಭಿಯಾನ ಜೋರಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಮೊನ್ನೆ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಆದೇಶ ನೀಡಿದೆ. ಆದರೂ ಲಡಾಖ್ ಗಡಿಯಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇರುವ ಚೀನಾಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಪೆಟ್ಟು ನೀಡಿದೆ.
ರಸ್ತೆ ಪ್ರಾಜೆಕ್ಟ್ ಗಳಿಂದ ಚೀನಾ ಬ್ಯಾನ್..!
ಹೌದು..! ಮೊನ್ನೆ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಕೆಂಪು ದೇಶದ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿದ್ದ ಭಾರತ, ಈಗ ಭಾರತದ ಹೈ ವೇ ಪ್ರಾಜೆಕ್ಟ್ ಗಳಲ್ಲಿ ಚೀನಾ ಕಂಪನಿಗಳು ಭಾಗವಹಿಸದಂತೆ ಬ್ಯಾನ್ ಮಾಡಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಮಾಹಿತಿ ನೀಡಿದ್ದು, ಜಾಯಿಂಟ್ ವೆಂಚರ್ಸ್ ಸೇರಿದಂತೆ ಯಾವುದೇ ರೀತಿಯಲ್ಲಿ ಚೀನಾಕ್ಕೆ ಭಾರತದ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ನಾವು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲೂ ಚೀನಾ ಭಾಗಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೂಡ ಗಡ್ಕರಿ ತಿಳಿಸಿದ್ದಾರೆ.