ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆಗಾಗಿ ಸಿಂಗಾರಗೊಂಡು ಅಮೆರಿಕಾ ಅಧ್ಯಕ್ಷರ ಬರುವಿಕೆಗಾಗಿ ಕಾದುಕುಳಿತಿದೆ. ಹೌದು, ಗುಜರಾತಿನ ಅಲಹಬಾದ್‍ನಲ್ಲಿ ನಿರ್ಮಿಸಲಾಗಿರುವ ಮೊಟೆರಾ ಕ್ರೀಡಾಂಗಣ ಜಗತ್ತಿನಲ್ಲೆ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಈವರೆಗೂ ಅತಿದೊಡ್ಡ ಕ್ರೀಡಾಂಗಣ ಎಂದು ಕರೆಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದ ದಾಖಲೆಯನ್ನ ಈ ಮೊಟೆರಾ ಬ್ರೇಕ್ ಮಾಡಿ, ತನ್ನ ಹೆಸರಿಗೆ ಬರೆದುಕೊಳ್ಳಲಿದೆ.
ಸುಮಾರು 700 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕ್ರೀಡಾಂಗಣವನ್ನ ನಿರ್ಮಿಸಲಾಗಿದೆ. ಬರೋಬ್ಬರಿ ಒಂದು ಲಕ್ಷ 10 ಸಾವಿರ ಸಾಮಥ್ರ್ಯವನ್ನ ಹೊಂದಿದೆ. ಇದು 70 ಕಾರ್ಪೊರೇಟ್ ಬಾಕ್ಸ್ ಗಳು ಮತ್ತು ನಾಲ್ಕು ಡ್ರೆಸ್ಸಿಂಗ್ ರೂಂಗಳನ್ನು ಒಳಗೊಂಡಿದೆ. ಮತ್ತೊಂದೆಡೆ, ಇದು ಒಲಿಂಪಿಕ್ಸ್ ಗಾತ್ರದ ಈಜುಕೊಳವನ್ನೂ ಒಳಗೊಂಡಿದೆ. ಅಂತರರಾಷ್ಟ್ರೀಯ ಪಂದ್ಯವನ್ನು ಈ ಕ್ರೀಡಾಂಗಣದಲ್ಲಿ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.
2017ರ ಜನವರಿಯಲ್ಲಿ ಕ್ರೀಡಾಂಗಣದ ಕಾಮಗಾರಿಯನ್ನ ಆರಂಭಿಸಲಾಯ್ತು. ಇದಕ್ಕೂ ಮುನ್ನ ಇಲ್ಲಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸ ಕ್ರೀಡಾಂಗಣ ನಿರ್ಮಿಸಲಾಗಿದೆ. ಏಷ್ಯಾ- ವಿಶ್ವ ಇಲೆವೆನ್ ಪಂದ್ಯವನ್ನು ಇಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಭಾರತದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಕೋಲ್ಕತ್ತಾದ ಈಡನ್ ಗಾರ್ಡನ್ ಆಗಿತ್ತು. ಇದರ ಸಾಮಥ್ರ್ಯ ಸುಮಾರು ಒಂದು ಲಕ್ಷ ಇದ್ದರೂ, ಪ್ರಧಾನ ಕಟ್ಟಡ ಮತ್ತೆ ನಿರ್ಮಿಸಿ ಅದನ್ನು 66,000ಕ್ಕೆ ಇಳಿಸಲಾಗಿದೆ.
ಒಟ್ಟಾರೆ, ನಾಳೆ ಅಮೆರಿಕಾ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಎರಡುದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಗುಜರಾತ್‍ನ ಅಲಹಾಬಾದ್‍ಗೆ ನಾಳೆ ಬಂದಿಳಿಯಲಿರುವ ಟ್ರಂಪ್, ರೋಡ್ ಶೋ ನಡೆಸಿ ಬಳಿಕ ಮೊಟೆರಾ ಕ್ರೀಡಾಂಗಣವನ್ನ ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಮೊಟೆರಾ ಕ್ರೀಡಾಂಗಣ ಜನರಿಂದ ತುಂಬಿತೊಳಕಲಿದೆ.








