ಟಿ20 ವಿಶ್ವಕಪ್ (T20 World Cup 2024) ಸೂಪರ್ 8ರ ಪಂದ್ಯಗಳು ಕೊನೆಯ ಘಟ್ಟಕ್ಕೆ ಬಂದಿವೆ. ಇಂಗ್ಲೆಂಡ್ ವಿರುದ್ಧ ಸೋತ ಅಮೆರಿಕ ಟೂರ್ನಿಯಿಂದ ಹೊರ ಬಿದ್ದಿದೆ.
ಇಂಗ್ಲೆಂಡ್ ತಂಡ ಅಮೆರಿಕ (United States vs England) ವಿರುದ್ಧ 10 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಅಮೆರಿಕ ವಿರುದ್ಧದ ಪಂದ್ಯ ಮಹತ್ವ ಪಡೆದಿತ್ತು. ಆದರೆ, ಈ ಪಂದ್ಯವನ್ನು ಭರ್ಜರಿಯಾಗಿ ಗೆದ್ದು, ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ನೆಟ್ ರನ್ ರೇಟ್ ಉತ್ತಮ ಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಇಂಗ್ಲೆಂಡ್ ಭಾರಿ ಅಂತರದ ಜಯ ಸಾಧಿಸಬೇಕಾಗಿತ್ತು. ಅದರಂತೆ ಇಂಗ್ಲೆಂಡ್ ತಂಡ ಕೇವಲ 9.5 ಓವರ್ ಗಳಲ್ಲಿಯೇ ಗೆಲುವಿನ ದಡ ಸೇರಿದೆ. ಮೊದಲು ಬ್ಯಾಟ್ ಮಾಡಿದ ಅಮೆರಿಕ ತಂಡ 18.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 9.5 ಓವರ್ ಗಳಲ್ಲಿಯೇ 10 ವಿಕೆಟ್ ಗಳ ಜಯ ಸಾಧಿಸಿದೆ.
ಈ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಮೂರು ಪಂದ್ಯಗಳಿಂದ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಾಲ್ಕು ಅಂಕ ಗಳಿಸಿದೆ. ಈ ಮೂಲಕ ಈಗ ಬಿ ಗ್ರೂಪ್ ನಲ್ಲಿ ಅಗ್ರ ಸ್ಥಾನದಲ್ಲಿದೆ. ಸದ್ಯ ಇಂಗ್ಲೆಂಡ್ನ ನೆಟ್ ರನ್ ರೇಟ್ +1.992 ಆಗಿದ್ದು, ಇದು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ಗಿಂತ ಉತ್ತಮವಾಗಿದೆ.