ರಾಜೀನಾಮೆಯಿಂದ ತಪ್ಪಿಸಿಕೊಳ್ಳಲು ಬಜೆಟ್ ಅಧಿವೇಶನವನ್ನೇ ಮುಂದೂಡಿದ ನೇಪಾಳ ಪ್ರಧಾನಿ
ಕಠ್ಮಂಡ್, ಜುಲೈ 2: ಕ್ಯಾಬಿನೆಟ್ ಸಭೆ ಮತ್ತು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರೊಂದಿಗಿನ ಸಂವಾದದ ನಂತರ ನೇಪಾಳ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಗುರುವಾರ ಸಂಸತ್ತಿನ ಬಜೆಟ್ ಅಧಿವೇಶನವನ್ನು ಮುಂದೂಡಿದರು ಎಂದು ಕಠ್ಮಂಡು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಭಾರತ ಸರ್ಕಾರ ಮತ್ತು ಅವರ ರಾಜಕೀಯ ಪ್ರತಿಸ್ಪರ್ಧಿಗಳು ಅವರನ್ನು ಅಧಿಕಾರದಿಂದ ಹೊರಹಾಕಲು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿಕೊಂಡ ನಂತರ ಓಲಿ ಅವರ ರಾಜೀನಾಮೆಗೆ ದೇಶದಲ್ಲಿ ಒತ್ತಡ ಹೆಚ್ಚಾಗಿತ್ತು.

ತಮ್ಮ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅದರಿಂದ ತಪ್ಪಿಸಿಕೊಳ್ಳಲು ರಾಜಕೀಯ ಸಂಚು ರೂಪಿಸಿರುವ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ, ಇದೀಗ ಸಂಸತ್ ಅಧಿವೇಶವನ್ನೇ ಮುಂದೂಡಿದ್ದಾರೆ. ಗುರುವಾರ ಬೆಳಗ್ಗೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಪ್ರಧಾನಿ ಓಲಿ, ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆ ನಡೆಸಿದ್ದ ಅವರು, ಸಂಸತ್ ಅನ್ನು ಬರ್ಖಾಸ್ತುಗೊಳಿಸದೆ, ಅಧಿವೇಶನವನ್ನು ಮುಂದೂಡಲು ರಾಷ್ಟ್ರಪತಿಯವರ ಅನುಮತಿ ಪಡೆಯುವ ನಿರ್ಣಯ ಕೈಗೊಂಡರು. ಈ ನಿರ್ಣಯಕ್ಕೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಅನುಮತಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಸದ್ಯಕ್ಕೆ ಸದನದಲ್ಲಿ ನಡೆಯಲಿದ್ದ ಬಲಾಬಲ ಪರೀಕ್ಷೆಯಿಂದ ಓಲಿ ಪಾರಾಗಿದ್ದಾರೆ.
ಓಲಿ ಅವರ ರಾಜೀನಾಮೆಗೆ ಒತ್ತಾಯಿಸಿರುವ ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಸಹ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡಾ, ಬುಧವಾರ ನಡೆದ ಪಕ್ಷದ ಸಭೆಯಲ್ಲಿ ಪಕ್ಷದ ಸ್ಥಾಯಿ ಸಮಿತಿಯ 44 ಸದಸ್ಯರ ಪೈಕಿ 31 ಸದಸ್ಯರು ಓಲಿ ವಿರುದ್ಧವಾಗಿ ನಿಂತಿದ್ದಾರೆ. ಹಾಗಾಗಿ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.








