ನವದೆಹಲಿ : ದೇಶದ ಜನರನ್ನುದ್ದೇಶಿಸಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಭಾಷಣದಲ್ಲಿ.. ಹಿಂದುಗಳ ಎಲ್ಲಾ ಹಬ್ಬಗಳನ್ನು ಉಲ್ಲೇಖಿಸಿ ನವೆಂಬರ್ ಅಂತ್ಯದವರೆಗೆ ಉಚಿತ ಅಕ್ಕಿ/ ಗೋಧಿ ನೀಡುವುದಾಗಿ ಘೋಷಿಸಿದ್ದಾರೆ. ಮೋದಿಯ ಈ ಘೋಷಣೆ ಎಷ್ಟೋ ಬಡ ಜನರು ನೆಮ್ಮದಿಯಾಗಿರುವಂತೆ ಮಾಡಿದೆ.
ಈಗಾಗಲೇ ಕೊರೊನಾ ಕಾಟದಿಂದ ತತ್ತರಿಸಿರುವ ದೇಶದ ಬಡಜನರಿಗೆ ಮೋದಿಯ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಸಿವು ನೀಗಿಸುತ್ತಿದೆ. ಈ ಯೋಜನೆಯನ್ನ ವಿಸ್ತರಣೆ ಮಾಡುವ ಮೂಲಕ ಪ್ರಧಾನಿ ಮೋದಿ ಬಡವರಿಗೆ ನೆರವಾಗಿದ್ದಾರೆ. ಪ್ರಧಾನಿಗಳ ಈ ನಿರ್ಧಾರವನ್ನು ವಿಪಕ್ಷಗಳು ಕೂಡ ಸ್ವಾಗತಿಸಿವೆ.
ಈ ಎಲ್ಲದರ ಮಧ್ಯೆ ಪ್ರಧಾನಿಗಳ ಭಾಷಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಏನಂದರೇ,
ನಮೋ ಭಾಷಣದಲ್ಲಿ ‘ಜುಲೈ ತಿಂಗಳಿನಿಂದ ಹಬ್ಬಗಳ ಋತು ಆರಂಭಗೊಳ್ಳುತ್ತದೆ, ಜುಲೈ 5ರಂದು ಗುರುಪೂರ್ಣಿಮಾ ಆಚರಿಸಲಾಗುತ್ತದೆ, ನಂತರ ಶ್ರಾವಣ ಮಾಸ ಆರಂಭಗೊಳ್ಳುತ್ತದೆ, ಮುಂದೆ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಓಣಂ, ಕಟಿ ಬಿಹು, ನವರಾತ್ರಿ, ದುರ್ಗಾ ಪೂಜೆ ಹಾಗೂ ದಸರಾ ಬರುತ್ತದೆ,” ಎಂದು ಹೀಗೆ ಹಬ್ಬಗಳ ಹೆಸರು ಹೇಳುತ್ತಾ ಹೋದ ಪ್ರಧಾನಿ ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಾದ ಈದುಲ್ ಅಝ್ ಹಾ ಹಾಗೂ ಮುಹರ್ರಂ ಅನ್ನು ಬಿಟ್ಟಿದ್ದೇಕೆ ಎಂದು ಹಲವು ಟ್ವಿಟ್ಟರಿಗರು ಪ್ರಶ್ನಿಸಿದ್ದಾರೆ.
‘ನರೇಂದ್ರ ಮೋದಿ ಎಲ್ಲಾ ಹಬ್ಬಗಳ ಹೆಸರುಗಳನ್ನು ಉಲ್ಲೇಖಿಸುವಾಗ ಮುಂಬರುವ ಈದ್ ಉಲ್ಲೇಖಿಸಿಲ್ಲ, ದೊಡ್ಡ ವಿಚಾರವೇನಲ್ಲ, ನಮಗೆ ಅದರ ಪರಿವೆಯಿಲ್ಲ.
ಆದರೆ ಅದು ಅವರು ಅಗ್ಗದ ಮನಸ್ಥಿತಿಯನ್ನು ಸೂಚಿಸುತ್ತದೆ. ನಾವು ಭಾರತೀಯ ಮುಸ್ಲಿಮರು ಕಳೆದುಕೊಳ್ಳಲು ಏನೂ ಇಲ್ಲ” ಎಂದು ಒಬ್ಬ ಟ್ವಿಟ್ಟರಿಗ ಟ್ವೀಟ್ ಮಾಡಿದ್ದರೇ, ಇನ್ನೊಬ್ಬರು ‘ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು, ಸಿಖರು ಹಾಗೂ ಬೌದ್ಧರೂ ಇದ್ದಾರೆ ಹಾಗೂ ಅವರಿಗೂ ಹಬ್ಬಗಳ ಆಚರಣೆಯಿದೆ ಎಂದು ಮರೆತಿದ್ದಾರೆ” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.









