ನನಗೆ ಮಾಸ್ಕ್ ಧರಿಸುವ ಪರಿಸ್ಥಿತಿ ಇನ್ನೂ ಬಂದಿಲ್ಲ – ಅಮೆರಿಕ ಅಧ್ಯಕ್ಷ ಟ್ರಂಪ್
ವಾಷಿಂಗ್ಟನ್, ಜುಲೈ 3: ಕೋವಿಡ್ -19 ಸೋಂಕು ವ್ಯಾಪಕವಾಗಿ ಹರಡಿರುವ ಪ್ರಸ್ತುತ ಸಮಯದಲ್ಲಿ ಮಾಸ್ಕ್ ಧರಿಸುವುದು ಅಥವಾ ಧರಿಸದಿರುವುದು ಅಮೆರಿಕದಲ್ಲಿ ಹೆಚ್ಚು ಚರ್ಚಾಸ್ಪದ ವಿಷಯವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಲು ಹಿಂಜರಿಯುತ್ತಿರುವುದು ಚರ್ಚೆಯ ಕೇಂದ್ರಬಿಂದುವಾಗಿದೆ. ಅಮೆರಿಕದಲ್ಲಿ ಪ್ರತಿ ನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸದೆಯೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸುತ್ತಿಲ್ಲ ಎಂದು ಅನೇಕ ಅವರ ಹಿಂಬಾಲಕರು ಕೂಡ ಮಾಸ್ಕ್ ಗಳನ್ನು ಧರಿಸುತ್ತಿಲ್ಲ. ಅಮೆರಿಕದಲ್ಲಿ ಮಾಸ್ಕ್ ಧರಿಸುವವರು ಟ್ರಂಪ್ ಅವರ ವಿರೋಧಿಗಳು ಮತ್ತು ಮಾಸ್ಕ್ ಧರಿಸದವರು ಅವರ ಬೆಂಬಲಿಗರು ಎನ್ನುವ ಟ್ರೆಂಡ್ ಕಂಡುಬರುತ್ತಿದ್ದು, ಅಧ್ಯಕ್ಷರ ನಡವಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಾಸ್ಕ್ ಧರಿಸದೇ ಇರುವ ತಮ್ಮ ನಿಲುವಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಸ್ಕ್ ಧರಿಸಬಾರದು ಎಂದೇನು ಇಲ್ಲ. ಆದರೆ ನನಗೆ ಮಾಸ್ಕ್ ಧರಿಸುವ ಪರಿಸ್ಥಿತಿ ಇನ್ನೂ ಬಂದಿಲ್ಲ . ಮಾಸ್ಕ್ ಧರಿಸಲೇಬೇಕು ಎನ್ನುವ ಸನ್ನಿವೇಶ ಎದುರಾದರೆ ಖಂಡಿತವಾಗಿಯೂ ನಾನು ಮಾಸ್ಕ್ ಧರಿಸುತ್ತೇನೆ ಎಂದು ಹೇಳಿದ್ದಾರೆ. ಮಾಸ್ಕ್ ಧರಿಸುವುದನ್ನು ರಾಷ್ಟ್ರದಾದ್ಯಂತ ಕಡ್ಡಾಯಗೊಳಿಸಬೇಕು ಎಂಬ ಅಭಿಪ್ರಾಯವನ್ನು ವಿರೋಧಿಸಿದ ಟ್ರಂಪ್ ಕೆಲವೊಂದು ಸ್ಥಳದಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಕೊರೊನಾದಿಂದ ದೂರವಿರಲು ಅಷ್ಟು ಸಾಕೆಂದೆನಿಸುತ್ತದೆ ಎಂದು ಹೇಳಿದರು. ಆದಷ್ಟು ಬೇಗನೆ ಕೊರೊನಾ ವೈರಸ್ ಗೆ ನಾವು ಲಸಿಕೆ ಕಂಡು ಹಿಡಿಯಲಿದ್ದು, ಖಂಡಿತವಾಗಿಯೂ ಕೋವಿಡ್-19 ವೈರಸ್ ಅನ್ನು ನಿರ್ನಾಮಗೊಳಿಸುತ್ತೇವೆ ಎಂದು ಹೇಳಿದರು.
ಅಮೆರಿಕದ ಆರೋಗ್ಯ ತಜ್ಞ ಆಂಥೋನಿ ಫಾಸಿ ಅವರು ನಾವು ಕೊರೊನಾ ತಡೆಗಟ್ಟುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದು, ಅಮೆರಿಕದಲ್ಲಿ ಈಗಾಗಲೇ 1 ಲಕ್ಷದ 26 ಸಾವಿರ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅಮೆರಿಕ ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಸೂಕ್ತ ಕ್ರಮಗಳನ್ನು ತೆಗದುಕೊಂಡಿಲ್ಲ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆರ್ಥಿಕ ಚಟುವಟಿಕೆಯ ಜೊತೆಗೆ ಕೊರೊನಾ ನಿಯಂತ್ರಣ ಕೂಡ ಅಷ್ಟೇ ಮುಖ್ಯವಾಗಿದ್ದು, ಎಂದು ಫಾಸಿ ಹೇಳಿದ್ದಾರೆ.
ಅಮೆರಿಕದಲ್ಲಿ ಈಗ ಮಾಸ್ಕ್ ಧರಿಸುವ ಬಗ್ಗೆ ರಾಜಕೀಯ ಪ್ರಾರಂಭವಾಗಿದ್ದು, ಮಾಸ್ಕ್ ಧರಿಸುವವರು ಟ್ರಂಪ್ ವಿರೋಧಿ, ಮಾಸ್ಕ್ ಧರಿಸದೆ ಇರುವವರು ಟ್ರಂಪ್ ಬೆಂಬಲಿಗರು ಎನ್ನುವ ಚರ್ಚೆ ನಡೆಯುತ್ತಿದೆ. ಹೀಗಾಗಿ ಅಧ್ಯಕ್ಷ ಟ್ರಂಪ್ ಕೂಡ ಮಾಸ್ಕ್ ಧರಿಸ ಬೇಕು. ಇದರಿಂದಾಗಿ ಟ್ರಂಪ್ ಅವರ ಅಸಂಖ್ಯಾತ ಬೆಂಬಲಿಗರು ಸಹ ಮಾಸ್ಕ್ ಧರಿಸಲು ಮುಂದಾಗುತ್ತಾರೆ ಎಂದು ಒತ್ತಾಯಿಸಿದ್ದಾರೆ.