ನಿಮಗೊಂದು ಧನ್ಯವಾದ
ಏನೇ ಆದರೂ ನಾನು ಹೊಣೆಯಲ್ಲ, ಎಲ್ಲವೂ ನನ್ನ ಹಣೆಬರಹದಲ್ಲಿ ಇದ್ದಂತೆ ಆಗಲಿ ಎಂದು ಕಾಣದ ಹಣೆಬರಹವ ದೂರುವ ಮನುಜರು ನಾವುಗಳು. ಒಂದು ಬಾರಿಯು ನನ್ನ ತಪ್ಪಿದೆಯೆಂದು ಒಪ್ಪಿಕೊಂಡವರಲ್ಲ. ಹಣೆಬರಹ ಎಂಬುದು ಒಂದು ನಂಬಿಕೆ.ಯಾವುದೇ ವಿಚಾರ ನಮ್ಮ ಪ್ರಯತ್ನ ಇದ್ದಾಗ್ಯೂ ಕೈ ಮೀರಿ ಹೋದರೆ ಹಣೆಬರಹವೇ ಹೊಣೆ!ಹೀಗೆ ಪ್ರತಿ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಹಣೆಬರಹವ ನೆನೆಯದೆ ಇರುವುದಿಲ್ಲ.ಅಂತೆಯೇ ನಮ್ಮ ಜೀವನದಲ್ಲಿ ಇತರ ವ್ಯಕ್ತಿಗಳು!
ಹಾ, ನಿಜ! ನಾವೇನೋ ಅಂದುಕೊಂಡಿರುತ್ತೇವೆ.ನಮ್ಮವರಲ್ಲಿ ವಿಚಾರವನ್ನು ಹಂಚಿಕೊಳ್ಳುತ್ತೇವೆ. ಆಗುವ ಕಾರ್ಯ ಆಗದಿದ್ದರೆ ನಮ್ಮವರನ್ನೇ ದೂರುತ್ತೇವೆ.ಆದರೆ ಅದೇ ಕಾರ್ಯ ಅಧ್ಬುತವಾಗಿ ನಡೆದರೆ ಅವರ ನೆನಪು ಒಂದು ದಿನ ಇರುವುದೂ ಕೂಡ ಕಷ್ಟವೇ!ಅಂತೆಯೇ ಕಾರ್ಯ ಸಿಧ್ಧಿಗೊಂಡರೂ ಹಣೆಬರಹಕ್ಕೆ ಒಂದು ದಿನದ ಹೊಗಳಿಕೆಯೂ ಸಲ್ಲಲಿಲ್ಲ ! ತಪ್ಪಾದೊಡನೆ ಎಲ್ಲದ್ದಕ್ಕೂ ನೀನೇ ಕಾರಣ ಎನ್ನುತ್ತೇವೆ ಪಾಪದ ವಿಧಿಗೆ. ಕಾಣದ ದೇವರು ಕಾಣುವನು ನಮ್ಮ ! ಎಂಬುದೇ ಮರೆತಿದ್ದೇವೆ.

ಪ್ರಪಂಚದಲ್ಲಿರುವ ಸಕಲ ಜೀವಿಯೂ ದೇವರನ್ನಾಧರಿಸಿದೆ.ನಾಸ್ತಿಕನಾದರೂ ಅವನ ಹೆತ್ತ ತಂದೆ-ತಾಯಿ ದೇವರು ಎಂಬುದನ್ನು ನಂಬಲೇ ಬೇಕು. ಇದುವರೆಗೆ ತಂದೆ-ತಾಯಿಗೆ ಎಷ್ಟು ಬಾರಿ ಧನ್ಯವಾದ ತಿಳಿಸಿದ್ದೇವೆ? ನಮ್ಮ ಧನ್ಯವಾದ ಅವರ ತ್ಯಾಗದ ಮುಂದೆ ಶೂನ್ಯ.ವಯಸ್ಸಾದ ಮೇಲೆ ಅವರೇ ಬೇಡವಾದರು.ಅದೇ ಮುಪ್ಪು ಮುಂದಕ್ಕೆ ನಮಗೆ ಕಾದಿದೆ ಎಂಬುದೇ ಮರೆತು ಹೋಗಿದೆ…..
ಹುಟ್ಟಿದ ಮೇಲೆ ಸಾವು ಖಚಿತ.ಅದನ್ನು ತಡೆಯಲು ಸಾಧ್ಯವಿಲ್ಲ.ಸಾವು ನಮಗೂ ಇದೆ ಎಂಬುದು ಗೊತ್ತಿದೆ.ಅದು ಯಾವಾಗ ಬರುತ್ತೆ ಎಂದು ಗೊತ್ತಿದ್ದರೆ ಇನ್ನೇನು ಆವಾಂತರಗಳು ನಡೆಯುತ್ತಿದ್ದವೋ? ಆ ದೇವರೇ ಬಲ್ಲ.
ಜೀವನದಲ್ಲಿ ನಾವು ಅದೆಷ್ಟೋ ಜೀವಿಗಳಿಗೆ ಧನ್ಯವಾದ ತಿಳಿಸಬೇಕು. ಆದರೆ ಅದನ್ನು ಮರೆತ ನಾವು ಕೇವಲ ಅವರ ತಪ್ಪುಗಳನ್ನು ಮಾತ್ರ ಎತ್ತಿಹಿಡಿಯುತ್ತೇವೆ. ಅದೇ ನಾವು ಮಾಡುವ ಮೊದಲ ತಪ್ಪು. ಮನುಷ್ಯನಿಗೆ ಆಗಾಗ ಒಂಟಿತನ ಕಾಡುತ್ತದೆ.ಭಾವನೆಗಳೇ ಜೀವಾಳವಾಗಿರುವ ಮನುಜನಿಗೆ ಈ ರೀತಿಯ ನೋವು ಸಹಜ.
ನನಗಿರುವ ಮೊದಲ ಗೆಳೆಯ ನಾನೇ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.ಮೊದಲು ನಮ್ಮನ್ನು ನಾವು ಪ್ರೀತಿಸಬೇಕು.ಯಾರಿಂದಲೋ ನೋವಾಯಿತೆಂದು ಇತರರನ್ನು ದೂರುವ ಬದಲು ನನ್ನೆಲ್ಲ ನೋವುಗಳಿಗೆ ನಾನೇ ಕಾರಣ ಎಂಬುದು ತಿಳಿದರೆ ಸಾಕು.ಮುಂದಿನ ಪ್ರತಿ ದಿನವೂ ಖುಷಿಯ ಪ್ರತೀಕವಾಗಿರುತ್ತದೆ…..

ಮನುಷ್ಯ ಜನ್ಮವು ತನ್ನ ತಪ್ಪನ್ನು ಬದಿಗೊತ್ತಿ ಇತರರನ್ನು ದೂರುವುದರಲ್ಲೇ ಮುಳುಗಿಹೋಗಿದೆ. ನಮ್ಮ ತಪ್ಪು ನಮಗೆ ತಿಳಿದಿಲ್ಲ. ಹಾಗಾಗಿ ಹಣೆಬರಹವೇ ಎಲ್ಲದ್ದಕ್ಕೂ ಹೊಣೆ,ಇತರರೇ ನನ್ನ ನೋವಿಗೆ ಕಾರಣ,ದೇವರೇ ನೀ ನನಗೆ ಬೇಡಿದ್ದು ಕೊಟ್ಟಿಲ್ಲ ಎಂಬುದು ನಮ್ಮಿಂದ ದೂರವಾಗಬೇಕು.ನನಗಿಷ್ಟು ಕೊಟ್ಟಿದ್ದೀಯ ದೇವರೆ ನಿನಗೊಂದು ಧನ್ಯವಾದ ಎಂಬ ಮಾತು ಅದೆಷ್ಟೋ ನಿರಾಳತೆಯನ್ನು ನೀಡುತ್ತದೆ. ದೇವರೊಬ್ಬನೇ ಇಡೀ ಪ್ರಪಂಚದ ಜೀವಿಗಳನ್ನು ಸಲಹುತ್ತಾನೆ. ಪ್ರತಿಯೊಬ್ಬರ ಕರೆಗೂ ಓ ಗೊಡುತ್ತಾನೆ.
ಎಲ್ಲರ ಕರೆಗೆ ಓ ಗೊಟ್ಟು ನಮ್ಮೆಡೆಗೆ ಬರುವಾಗ ಸ್ವಲ್ಪ ತಡವಾದೀತು…. ಅದುವರೆಗೆ ನಮ್ಮ ಪ್ರಯತ್ನ ನಾವು ಮಾಡಬೇಕು…….. ದೇವರು ಖಂಡಿತವಾಗಿಯೂ ಕೈ ಹಿಡಿಯುತ್ತಾನೆ ಎನ್ನುವ ನಂಬಿಕೆ ಗಟ್ಟಿಯಾದಾಗ ಮುಂದೆಲ್ಲವೂ ಒಳಿತಾಗುತ್ತದೆ.
ಮನಸ್ಸೆಂಬ ಮಾಯೆ ಹಿಡಿತದಲ್ಲಿದ್ದರೆ ಅದುವೇ ನಮ್ಮ ದೊಡ್ಡ ಬಂಧು.ಕಾಣದ ದೇವರು, ಕಾಣದ ಹಣೆಬರಹ,ಕಾಣದ ಮನಸ್ಸೆಂಬ ಗೆಳೆಯರಿಹರು. ಪ್ರತಿನಿತ್ಯವೂ ಕಣ್ಣೆದುರೇ ಪ್ರತ್ಯಕ್ಷವಾಗಿರುವ ತಂದೆ-ತಾಯಿ ದೇವರಂತಿರಲು ನಮ್ಮ ಜೀವನದ ಮೊದಲ ಧನ್ಯವಾದ ಅವರಿಗೆ ತಾನೇ?!…..
ನಿಮಗೊಂದು ಧನ್ಯವಾದ ಎಂಬುದು ಮನಸ್ಸಿನಲ್ಲಿ ಒಂದು ಬಾರಿ ನೆನೆದು ಬಿಡಿ…..ಎಲ್ಲವು ನಿಮಗೆ ಸಿಕ್ಕಂತೆಯೇ……..
ಸುಷ್ಮಾ.ಎಸ್.ಪೂಜಾರಿ.ಕಲ್ಯಾ.








