ಶಿವಮೊಗ್ಗ : ಕೊರೊನಾ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಲಾಕ್ ಡೌನ್ ಅಗತ್ಯವಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚುತ್ತಿದೆ. ಸೋಂಕು ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ. ಸೋಂಕು ನಿಯಂತ್ರಣಕ್ಕೆ ಮತ್ತೊಂದು ಲಾಕ್ ಡೌನ್ ಅಗತ್ಯವಿಲ್ಲ. ಆದರೆ ಸ್ವೇಚ್ಛಾಚಾರದ ಸಂಚಾರಕ್ಕೆ ಅವಕಾಶ ಇಲ್ಲ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಸೋಂಕಿತರ ಸಂಖ್ತೆ ಹೆಚ್ಚುತ್ತಿದ್ದು, ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ. ಶೇ.95ಜನ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಗುಂಪು ಸೇರುವುದು, ಸಾಮಾಜಿಕ ಅಂತರ ಪಾಲಿಸದೇ ಇರುವ ದೃಶ್ಯ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣಗಳ ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆಯಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ 60 ಸಂಸ್ಥೆಗಳ ಪ್ರತಿನಿಧಿಗಳು ಬರಲಿದ್ದಾರೆ. ಲಾಕ್ ಡೌನ್ ಅಥವ ಇನ್ನಿತರ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಲಾಕ್ ಡೌನ್ ಬೇಕು- ಬೇಡಗಳ ಬಗ್ಗೆ ಜನರೇ ನಿರ್ಧರಿಸಲಿ ಎಂದರು.








