ಬೆಂಗಳೂರು: ಜೂನ್ 25ರಿಂದ ಆರಂಭವಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಇಂದಿಗೆ ಮುಕ್ತಾಯಗೊಂಡಿವೆ.
ಕೊರೊನಾ ಸೋಂಕು ಹರಡುವ ಭೀತಿಯ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಕರ್ನಾಟಕ ಇಂದು ಮತ್ತೊಮ್ಮೆ ದೇಶಕ್ಕೆ ಮಾದರಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ಕೊಟ್ಟು ಸುಗಮವಾಗಿ ಪರೀಕ್ಷೆ ಜರುಗಲು ಶ್ರಮಿಸಿದ ಸಿಬ್ಬಂದಿಗೆ, ಮಕ್ಕಳನ್ನು ಹುರಿದುಂಬಿಸಿದ ಪೋಷಕರಿಗೆ, ಧೈರ್ಯವಾಗಿ ಪರೀಕ್ಷೆ ಬರೆದ ಮಕ್ಕಳಿಗೆ ಅಭಿನಂದನೆಗಳು ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜ್ಯಾದಂತ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಈ ಬಾರಿ ಪರೀಕ್ಷೆ ಬರೆದಿದ್ದಾರೆ. ಅಲ್ಲಲ್ಲಿ ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಆತಂಕ ಹುಟ್ಟಿಸಿದ್ದು ಬಿಟ್ಟರೆ ಯಾವುದೇ ದೊಡ್ಡ ಯಡವಟ್ಟು ಆಗಿಲ್ಲ.
ಪೋಷಕರ ವಿರೋಧದ ನಡುವೆಯೂ ಸರ್ಕಾರವೇನೋ ಕೊರೊನಾ ಭೀತಿಯಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದು ಹೇಳುತ್ತಿದೆ. ಇನ್ನೊಂದು ವಾರದಲ್ಲೇ ಇದರ ಪರಿಣಾಮದ ಸತ್ಯ ದರ್ಶನ ಸರ್ಕಾರಕ್ಕೆ ಆಗಲಿದೆ ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.