ನಿನ್ನೆ ಪುಂಗಿ ಊದ್ದಿದ್ದ ನಮ್ಮ ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ ಎಂದು ಒಕ್ಕಣೆ ನೀಡಿ ಈಶ್ವರಪ್ಪ ಟ್ವೀಟ್
ಬೆಂಗಳೂರು, ಜುಲೈ 3: ನಿನ್ನೆ ಡಿಕೆಶಿ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಗ್ಗೆ ಕೊರೊನಾ ಬಂದಾಗಿನಿಂದ ಎಂದಾದರೂ, ಮೋದಿ ಹೊರಗಡೆ ಬಂದಿದ್ದಾರಾ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಇಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಚಿವ ಕೆ.ಎಸ್.ಈಶ್ವರಪ್ಪ, “ಮೋದಿ ಪ್ರಧಾನಿ ಆಗಲು ಲಾಯಕ್ಕಿಲ್ಲ, ಮನೆ ಬಿಟ್ಟು ಹೊರಬಂದಿಲ್ಲ ಎಂದು ನಿನ್ನೆ ಪುಂಗಿ ಊದ್ದಿದ್ದ ನಮ್ಮ ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ”ಎನ್ನುವ ಅಡಿಬರಹದೊಂದಿಗೆ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಜಿ ಲಡಾಕ್ ರಾಜಧಾನಿ ಲೇಹ್ ಗೆ ಭೇಟಿ ನೀಡಿ ಅಲ್ಲಿನ ಪ್ರಸ್ತುತ ಸಂಗತಿಗಳ ಬಗ್ಗೆ ಸೇನಾಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಒಬ್ಬ ದೇಶಪ್ರೇಮಿ ಪ್ರಧಾನಿ ಏನೆಂದು ತೋರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ನಡೆದ ಡಿಕೆಶಿ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ದೇಶದ ಅಭಿವೃದ್ದಿಯನ್ನು ಮಾಡಿ ಎಂದರೆ ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿ ಎನ್ನುತ್ತಾರೆ. ಕೊರೊನಾ ಬಂದಾಗಿನಿಂದ ಎಂದಾದರೂ ಮೋದಿ, ಹೊರಗಡೆ ಬಂದಿದ್ದಾರಾ ಎಂದು ಪ್ರಶ್ನಿಸಿದ್ದರು.








