ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದ ಪ್ರಚಾರದ ಗೀಳಿಗೆ ಯುವ ಜನಾಂಗ ಒಳಗಾಗಿ ಬಿಟ್ಟಿದೆ. ಪ್ರಚಾರ ಪಡೆಯುವುದಕ್ಕೆ ಏನೇನೋ ಮಾಡುತ್ತಿದ್ದಾರೆ. ಇಲ್ಲಿ ಮೂಕ ಸನ್ನೆ ಮೂಲಕ ಮಾತು ಬಾರದವರಿಗೆ ಅವಮಾನ ಮಾಡಿ, ಪೊಲೀಸರ ಅತಿಥಿಯಾಗಿದ್ದಾರೆ.
ಈ ಕಾರಣಕ್ಕಾಗಿ ರೇಡಿಯೋ ಜಾಕಿ ಸೇರಿದಂತೆ ಇಬ್ಬರನ್ನು ಸಿಸಿಬಿ ಸೈಬರ್ ಪೊಲೀಸರು (Cyber Police) ಬಂಧಿಸಿದ್ದಾರೆ. ಬಂಧಿತರನ್ನು ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ಆರೋಪಿಗಳು ಕಿವುಡ ಮತ್ತು ಮೂಗರ ಭಾಷೆಯಲ್ಲಿ ಅಶ್ಲೀಲ ಮೂಕ ಸನ್ನೆ ಮಾಡುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಬಂಧಿತ ರೋಹನ್ ಕಾರಿಯಪ್ಪ ರೇಡಿಯೊ ಜಾಕಿಯಾಗಿ ಕೆಲಸ ಮಾಡುತ್ತಿದ್ದ. ಮತ್ತೋರ್ವ ಆರೋಪಿ ಶರವಣ ಯಾವ ಕೆಲಸ ಮಾಡದೇ ಮನೆಯಲ್ಲೇ ಇದ್ದ. ಇವರಿಬ್ಬರು ವಿದ್ಯಾವಂತ ಯುವ ರಾಜಕಾರಣಿಗಳನ್ನು ಅಣಕಿಸುವ ಭರದಲ್ಲಿ ಮಾತು ಬಾರದ ಮೂಗರು ಬಳಸುವ ಸನ್ನೆಯ ಮೂಲಕ ಅಶ್ಲೀಲವಾಗಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರೋಹನ್ ಹಿಂದಿಯಲ್ಲಿ ರಾಜಕೀಯದ ಬಗ್ಗೆ ಮಾತನಾಡಿದರೆ, ಶರವಣ ಅದನ್ನು ಮೂಕ ಸನ್ನೆಯಲ್ಲಿ ಅವಹೇಳನ ಮಾಡಿದ್ದ. ಆರೋಪಿ ಶರವಣ ಮೂಕ ಸನ್ನೆಯನ್ನು ಕಲಿತವನಾಗಿದ್ದಾನೆ ಎನ್ನಲಾಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಸಂಘಟನೆಗಳು ದೆಹಲಿಯಲ್ಲಿ ದೂರು ದಾಖಲಿಸಿದ್ದವು. ಇವರು ಬೆಂಗಳೂರಿನವರು ಎನ್ನವುದು ಗೊತ್ತಾಗುತ್ತಿದ್ದಂತೆ ಕಮಿಷನರ್‌ಗೆ ದೂರು ನೀಡಲಾಗಿತ್ತು. ನಂತರ ಈ ಬಗ್ಗೆ ಸಿಸಿಬಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಈ ವಿಷಯವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿ ಆರೋಪಿಗಳು ಕ್ಷಮೆ ಕೂಡ ಕೇಳಿದ್ದರು ಎನ್ನಲಾಗಿದೆ.








