ಪ್ಯಾರಿಸ್ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಉಳಿದಿದ್ದ ಒಂದೇ ಒಂದು ಆಸೆಯೂ ಕಮರಿ ಹೋಗಿದೆ. ಸೆಮಿಫೈನಲ್ ನಲ್ಲಿ ಲಕ್ಷ್ಯ ಸೇನ್ ಸೋಲು ಕಂಡಿದ್ದಾರೆ.
ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಮೊಟ್ಟ ಮೊದಲ ಚಿನ್ನದ ಪದಕ ಜಯಿಸುವ ಭಾರತದ ಕನಸು ಲಕ್ಷ್ಯ ಸೇನ್ (Lakshya Sen) ಸೋಲಿನೊಂದಿಗೆ ಮತ್ತೊಮ್ಮೆ ನುಚ್ಚು ನೂರಾಗಿದೆ. ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಲಕ್ಷ್ಯ ಸೇನ್ ನೇರ ಗೇಮ್ ನಲ್ಲಿ ಸೋಲು ಕಂಡಿದ್ದಾರೆ.
ಆದರೆ, ಕಂಚಿನ ಪದಕ ಗೆಲ್ಲಲು ಸೇನ್ ಗೆ ಮತ್ತೊಂದು ಅವಕಾಶ ಇದೆ. ಅವರು ಈ ಪದಕಕ್ಕಾಗಿ ಪ್ಲೇ ಆಫ್ ನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಲಿದ್ದಾರೆ. ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಆಗಲು ಸೇನ್ ಗೆ ಇದೊಂದು ಅವಕಾಶ ಕೂಡ ಉಳಿದಿದೆ.
54 ನಿಮಿಷಗಳ ಸೆಮಿಫೈನಲ್ ಹಣಾಗಣಿಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಅಕ್ಸೆಲ್ ಸೆನ್ ವಿರುದ್ಧ ಸೇನ್ 20-22, 14-21 ನೇರ ಸೆಟ್ ಗಳ ಸೋಲು ಅನುಭವಿಸಿದ್ದಾರೆ. ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಿವಿ ಸಿಂಧು ಬೆಳ್ಳಿ ಮತ್ತು ಕಂಚು ಹಾಗೂ ಲಂಡನ್ ಗೇಮ್ಸ್ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಆದರೆ ಭಾರತವು ಬ್ಯಾಡ್ಮಿಂಟನ್ನಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಇದುವರೆಗೂ ಗೆದ್ದಿಲ್ಲ. ಈ ಬಾರಿಯೂ ಈ ಕನಸು ನೂಚ್ಚು ನೂರಾಗಿದೆ.