ಬಳ್ಳಾರಿ: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಸುಮಾರು ಎರಡು ತಿಂಗಳಿಂದ ದರ್ಶನ್ ಜೈಲಿನಲ್ಲಿದ್ದಾರೆ. ಆದರೆ, ಇನ್ನೊಂದೆಡೆ ಅವರ ಅಭಿಮಾನಿಗಳು ದರ್ಶನ್ ಆರೋಪದಿಂದ ಮುಕ್ತರಾಗಿ ಹೊರ ಬರಲಿ ಎಂದು ಹರಕೆ ಹೊರುತ್ತಿದ್ದಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಈ ಮಧ್ಯೆ ದೇವರೊಂದಿಗೆ ದರ್ಶನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿರುವ ಘಟನೆ ನಡೆದಿದ್ದು, ಅರ್ಚಕನನ್ನು ಅಮಾನತು ಮಾಡಲಾಗಿದೆ.
ಜಿಲ್ಲೆಯ ಕುರುಗೋಡುನಲ್ಲಿರುವ ಐತಿಹಾಸಿಕ ದೊಡ್ಡಬಸವೇಶ್ವರ ಮೂರ್ತಿ ಜೊತೆಗೆ ದರ್ಶನ್ ಭಾವಚಿತ್ರ ಇಟ್ಟು ಅರ್ಚಕ ಪೂಜೆ ಮಾಡಿದ್ದಾರೆ. ಪೂಜೆ ಸಲ್ಲಿಸಿರುವ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡು ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಚಕರನ್ನು ಅಮಾನತು ಮಾಡಲಾಗಿದೆ.
ಧಾರ್ಮಿಕ ಪೂಜೆಯ ಮೂಲಕ ಮೂರ್ತಿ ಕೆಳಗೆ ದರ್ಶನ್ ಪೋಟೊ ಇಟ್ಟು ಪೂಜೆ ಸಲ್ಲಿಸಲಾಗಿದೆ. ಅರ್ಚಕರೇ ದರ್ಶನ್ ಅವರ ಪೋಟೊ ಇಟ್ಟು ಪೂಜೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಐದಾರು ಭಾವಚಿತ್ರಗಳನ್ನ ಬಸವೇಶ್ವರರ ಮೂರ್ತಿಯ ಅಕ್ಕಪಕ್ಕ ಇಟ್ಟು ಪೂಜೆ ಮಾಡಲಾಗಿದೆ.
ನಟನ ಭಾವಚಿತ್ರ ಹಾಕಿದ್ದ ಹಿನ್ನೆಲೆಯಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ಪೋಟೊ ಇಟ್ಟು ಪೂಜೆ ಮಾಡಿರುವ ಅರ್ಚಕನನ್ನು ಮಲ್ಲಿ ಎಂದು ಗುರುತಿಸಲಾಗಿದ್ದು, ದೇವಸ್ಥಾನದ ಸಂಪ್ರದಾಯಕ್ಕೆ ಧಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅಮಾನತು ಮಾಡಿದ್ದಾರೆ.