ಸುಳ್ಯದಲ್ಲಿ ಕೊರೊನಾಗೆ ವೃದ್ಧೆ ಬಲಿ – ಜಿಲ್ಲೆಯಲ್ಲಿ ಕೊರೊನಾ ಉಲ್ಬಣ ಜ್ಯುವೆಲ್ಲರಿಗಳು 5 ದಿನ ಬಂದ್
ಮಂಗಳೂರು, ಜುಲೈ4: ಸುಳ್ಯದಲ್ಲಿ ಕೊರೊನಾಗೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಸುಳ್ಯ ತಾಲೂಕಿನ ಕೆರೆಮೂಲೆ ನಿವಾಸಿಯಾದ ಇವರು ಅನಾರೋಗ್ಯದ ಹಿನ್ನಲೆಯಲ್ಲಿ ವಾರದ ಹಿಂದೆ ಸುಳ್ಯದ ಆಸ್ಪತ್ರೆ ದಾಖಲಾಗಿದ್ದರು. ಎರಡು ದಿನಗಳ ನಂತರ ಅವರನ್ನು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವೃದ್ಧೆ ಮೃತಪಟ್ಟ ಬಳಿಕ ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೊರೊನಾ ಪರೀಕ್ಷೆ ನಡೆಸಿದ್ದು, ಇದೀಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ತೀವ್ರ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜ್ಯುವೆಲ್ಲರಿಗಳು ನಾಳೆಯಿಂದ ಐದು ದಿನಗಳ ಕಾಲ ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸಿವೆ.

ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿದಂತೆ ಎಲ್ಲ ಜ್ಯುವೆಲ್ಲರಿಗಳನ್ನು ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ನಿರ್ಧರಿಸಿದ್ದು, ಚಿನ್ನಾಭರಣ ಕಾಯ್ದಿರಿಸಿದವರು ಇಂದು (ಶನಿವಾರ) ಮಳಿಗೆಗೆ ಆಗಮಿಸಲು ಸೂಚನೆ ನೀಡಲಾಗಿದೆ.








