ನನ್ನನ್ನು ಅವರು ತಂಡದಿಂದ ಕೈಬಿಡಬಾರದಿತ್ತು… ಆಗ ನಾನು ಎಷ್ಟು ನೊಂದುಕೊಂಡಿದ್ದೆ ಗೊತ್ತಾ _ ಜಿಆರ್ ವಿ ಮನದಾಳದ ಮಾತು..
ಜಿ. ಆರ್. ವಿಶ್ವನಾಥ್. ವಿಶ್ವದ ಕಲಾತ್ಮಕ ಬ್ಯಾಟ್ಸ್ ಮೆನ್‍ಗಳಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು. ಸ್ಕ್ವೇರ್ ಕಟ್ ಮತ್ತು ಫ್ಲಿಕ್ಸ್ ಇದು ಜಿಆರ್‍ವಿ ಅವರ ಸಿಗ್ನೇಚರ್ ಸ್ಟೈಲ್. ಅಷ್ಟೇ ಅಲ್ಲ, ಭಾರತದ ಪರ ಆಡಿದ ಕರ್ನಾಟಕದ ಮೊದಲ ಸೂಪರ್ ಸ್ಟಾರ್ ಬ್ಯಾಟ್ಸ್ ಮೆನ್ ಕೂಡ ಹೌದು.
71ರ ಹರೆಯದ ಜಿಆರ್ ವಿ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಖಾಸಗಿ ಟಿವಿ ಚಾನೆಲ್ ನ ಕಾರ್ಯಕ್ರಮವೊಂದರಲ್ಲಿ ಜಿಆರ್ ವಿ ಅವರು ಮನ ಬಿಚ್ಚಿ ಮಾತನಾಡಿದ್ದಾರೆ. ತನ್ನ ಕ್ರಿಕೆಟ್ ಬದುಕಿನ ಕೆಲವೊಂದು ಸಿಹಿ -ಕಹಿ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
1970ರ ದಶಕದಲ್ಲಿ ವಿಶ್ವದ ಘಾತಕ ವೇಗದ ದಾಳಿಯ ಮುಂದೆ ಜಿಆರ್‍ವಿ ಅವರ ಮನಮೋಹಕ ಆಟಗಳ ನೆನಪುಗಳಿವೆ. ಸುನೀಲ್ ಗವಾಸ್ಕರ್ ನಂತೆ ಮಧ್ಯಮ ಕ್ರಮಾಂಕದಲ್ಲಿ ಜಿ.ಆರ್. ವಿಶ್ವನಾಥ್ ಅವರು ತಂಡಕ್ಕೆ ಆಧಾರಸ್ತಂಭವಾಗುತ್ತಿದ್ದರು. ಇಂತಹ ಜಿಆರ್‍ವಿ ಅವರು ತನ್ನ ಕ್ರಿಕೆಟ್ ಬದುಕಿನ ಆ ಒಂದು ಕೆಟ್ಟ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.
ಅದು 1982-83ನೇ ವರ್ಷ. ಪಾಕಿಸ್ತಾನದ ವಿರುದ್ಧದ ಆರು ಟೆಸ್ಟ್ ಪಂದ್ಯಗಳ ಸರಣಿ. ಆ ಸರಣಿಯಲ್ಲಿ ಜಿಆರ್ ವಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರು ಮುಂದಿನ ವೆಸ್ಟ್ ಇಂಡೀಸ್ ಮತ್ತು 1983ರ ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಇದು ಜಿಆರ್‍ವಿ ಅವರ ಮನಸ್ಸನ್ನು ಇಂದಿಗೂ ಕಾಡುತ್ತಿದೆಯಂತೆ.
ಪಾಕ್ ಸರಣಿಯ ನಂತರ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು. ಆಗ ನಾನು ತುಂಬಾನೇ ನೊಂದುಕೊಂಡಿದ್ದೆ. ಮೂರು ಇನಿಂಗ್ಸ್ ನಲ್ಲಿ ನಾನು ಕೆಟ್ಟ ನಿರ್ಧಾರ ತಗೊಂಡಿದ್ದೆ. ಆಟ ಅಂದ ಮೇಲೆ ಅದೆಲ್ಲಾ ಇರುತ್ತೆ. ಅಂತಹ ಪರಿಸ್ಥಿತಿಯಲ್ಲೂ ಮುಂದಿನ ಎರಡು ಇನಿಂಗ್ಸ್ ನಲ್ಲಿ ನಾನು ಚೆನ್ನಾಗಿಯೇ ಆಡಿದ್ದೆ. ರನ್ ಕೂಡ ದಾಖಲಿಸಿದ್ದೆ. ಆದ್ರೂ ಅವರು ನನ್ನನ್ನು ತಂಡದಿಂದ ಹೊರಗಿಡಬಾರದಿತ್ತು. ಆಗ ಕಪಿಲ್ ದೇವ್ ಅವರು ನಾಯಕನಾಗುವುದು ಪಕ್ಕಾ ಆಗಿತ್ತು. ಆದ್ರೆ ಘೋಷಣೆ ಮಾಡಿರಲಿಲ್ಲ ಎಂದು ಜಿಆರ್ ವಿ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಇನ್ನು ತನ್ನ ದೇಸಿ ಕ್ರಿಕೆಟ್ ಬದುಕಿನ ಬಗ್ಗೆ ಮಾತನಾಡಿದ ಜಿಆರ್ ವಿ, ಎ.ಪ್ರಸನ್ನ ಅವರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ರಾಜ್ಯ ತಂಡದ ಪರ ಆಡಲು ಅವರು ಸಾಕಷ್ಟು ಸಹಕಾರ ನೀಡಿದ್ದರು ಎಂಬುದನ್ನು ಹೇಳಿಕೊಂಡ್ರು. ಹಾಗೇ ಭಾರತದ ಪರ ಆಡಲು ಮನ್ಸೂರ್ ಆಲಿ ಖಾನ್ ಪಟೌಡಿ ಕೂಡ ಕಾರಣರಾಗಿದ್ದರು ಎಂದು ಜಿಆರ್‍ವಿ ಹೇಳಿದ್ರು.
ರಣಜಿ ಟ್ರೋಫಿ ಆಡುವಾಗ ಪಟೌಡಿ ಅವರು ಹೈದ್ರಬಾದ್ ಪರ ಆಡುತ್ತಿದ್ದರು. ಹಾಗಾಗಿ ನಾನು ಅವರ ವಿರುದ್ಧವಾಗಿಯೂ ಆಡಿದ್ದೆ. ಆಗ ಅವರು ನನ್ನ ಆಟವನ್ನು ಹತ್ತಿರದಿಂದ ಗಮನಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಅಧ್ಯಕ್ಷರ ಇಲೆವೆನ್ ತಂಡದಲ್ಲಿ ನನಗೆ ಆಡುವ ಅವಕಾಶ ಸಿಕ್ಕಿತ್ತು. ಆಗ ಚಂದೂ ಬೋರ್ಡೆ ಅವರು ನಾಯಕನಾಗಿದ್ದರು. ಬೋರ್ಡೆ ಜತೆ ಸೇರಿ ಉತ್ತಮ ಜೊತೆಯಾಟವನ್ನು ಆಡಿದ್ದೆ. ಹೀಗಾಗಿ ಚಂದೂ ಬೋರ್ಡೆ ಅವರು ಕೂಡ ಪಟೌಡಿ ಬಳಿ ನನ್ನ ಆಟದ ಬಗ್ಗೆ ಹೇಳಿದ್ದರು. ಪರಿಣಾಮ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಬೇಗನೇ ನಾನು ಭಾರತ ತಂಡವನ್ನು ಪ್ರತಿನಿಧಿಸುವಂತಾಯ್ತು ಅಂತ ಜಿಆರ್ ವಿ ಹೇಳಿಕೊಂಡ್ರು.
1969ರಲ್ಲಿ ಜಿಆರ್ ವಿಶ್ವನಾಥ್ ಅವರು ಆಸ್ಟ್ರೇಲಿಯಾ ವಿರುದ್ಧ ಕಾನ್ಪುರದಲ್ಲಿ ನಡೆದಿದ್ದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿದ್ದರು. 14 ವರ್ಷಗಳ ತನ್ನ ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ಜಿಆರ್‍ವಿ 14 ಶತಕಗಳು ಸೇರಿದಂತೆ ಸುಮಾರು ಆರು ಸಾವಿರ ರನ್ ದಾಖಲಿಸಿದ್ದರು.






