ನವದೆಹಲಿ: ಬಿಜೆಪಿ ನಾಯಕರು ಯಾವುದೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಕಾಂಗ್ರೆಸ್ ಹೈಕಮಾಂಡ್ (Congress High Command) ಸೂಚಿಸಿದೆ.
ಪ್ರಾಸಿಕ್ಯೂಷನ್ ಪ್ರಹಸನದ ಬಗ್ಗೆ ಸಿಎಂ-ಡಿಸಿಎಂ ಜಂಟಿಯಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ವಿವರಿಸಿದ್ದಾರೆ. ಸಂಪುಟ ಸಭೆಯ ನಿರ್ಣಯ, ಶಾಸಕಾಂಗ ಪಕ್ಷದ ಸಭೆ, ಮುಡಾ (MUDA Scam) ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ 100 ಪುಟಗಳ ವರದಿ ಸಲ್ಲಿಸಿದ್ದಾರೆ. ಈ ವೇಳೆ ಹೈಕಮಾಂಡ್ ನಾಯಕರು ಚರ್ಚೆ ನಡೆಸಿದ್ದಾರೆ.
ಕಾನೂನು ಹೋರಾಟ ನಡೆಸಿ, ನಾವಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಅಲ್ಲದೇ, ಗ್ಯಾರಂಟಿಗಳನ್ನು ನೋಡಿ ಬಿಜೆಪಿ-ಜೆಡಿಎಸ್ ಹೆದರಿದೆ. ರಾಜ್ಯಪಾಲರನ್ನು ಬಳಸಿ ಹಿಂದುಳಿದ ನಾಯಕನ ಮೇಲೆ ದಾಳಿ ನಡೆಸುವ ಯತ್ನ ಮಾಡುತ್ತಿದೆ ಎಂದು ಹೈಕಮಾಂಡ್ ಹೇಳಿದೆ.
ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಪ್ರಕರಣ ಈಗ ಕಾನೂನು ವ್ಯಾಪ್ತಿಗೆ ಬಂದಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ. ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಕಾನೂನು ಹೋರಾಟ ಮುಂದುವರಿಸಿ ಎಂದು ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಲಹೆ ನೀಡಿದ್ದಾರೆ.
ವಿಪಕ್ಷಗಳ ವಿಚಾರದಲ್ಲಿ ಮತ್ತಷ್ಟು ಅಗ್ರೆಸಿವ್ ಆಗಿ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಳ್ಳಿ. ಗ್ಯಾರಂಟಿ ಸಹಿಸದೇ ಬಿಜೆಪಿ, ಸಿಎಂ ವಿರುದ್ಧ ಆರೋಪ ಮಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ರಾಜ್ಯಪಾಲರ ನಡೆ ಖಂಡಿಸಿ ಬಿಜೆಪಿ ಜೆಡಿಎಸ್ ಹೋರಾಟಗಳನ್ನು ಹೊರ ತನ್ನಿ. ಮುಲಾಜಿಲ್ಲದೇ ಮಾತನಾಡಿ. ಅಗತ್ಯ ಎನಿಸಿದ ಪ್ರಕರಣದಲ್ಲಿ ತನಿಖೆಗೆ ನೀಡಿ. ಯಾವುದೇ ಕಾರಣಕ್ಕೂ ಸಿಎಂ ವಿರುದ್ಧ ಮಾತನಾಡುವಂತಿಲ್ಲ. ಸಿಎಂ ಬೆನ್ನಿಗೆ ನಿಲ್ಲಬೇಕು ಎಂದು ಎಲ್ಲ ನಾಯಕರಿಗೆ ಸಲಹೆ ನೀಡಲಾಗಿದೆ.