ಬೆಂಗಳೂರು: ಲಾರಿ (Lorry) ಚಾಲಕನ ನಿರ್ಲಕ್ಷ್ಯಕ್ಕೆ ಸುಮಾರು 20ಕ್ಕೂ ಅಧಿಕ ಕಂಬಗಳು (Electric Poles) ನೆಲಕ್ಕೆ ಉರುಳಿರುವ ಘಟನೆ ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಲಾರಿಯಲ್ಲಿ ಎಂ ಸ್ಯಾಂಡ್ ತುಂಬಿಕೊಂಡು ತೆರಳುತ್ತಿದ್ದ ಚಾಲಕ ಮಂಪರಿನಲ್ಲಿದ್ದ ಎನ್ನಲಾಗಿದೆ. ನಿದ್ದೆಯ ಮಂಪರಿನಲ್ಲಿಯೇ ವಾಹನ ಸ್ಟಾರ್ಟ್ ಮಾಡಿದ್ದಾನೆ. ಆದರೆ, ಲಾರಿಯ ಟಾಪ್ ಗೆ ವಿದ್ಯುತ್ ತಂತಿ ಸಿಲುಕಿದೆ. ಇದನ್ನು ಆತ ಗಮನಿಸಿಲ್ಲ. ಹೀಗಾಗಿ ಸುಮಾರು 20ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾನಿಯಾಗಿ, ನೆಲಕ್ಕೆ ಉರುಳಿವೆ.
ಚಿಕ್ಕಬಾಣಾವರ ಮುಖ್ಯರಸ್ತೆಯಲ್ಲೇ ಕಂಬಗಳು ಬಿದ್ದಿದ್ದು, ರಸ್ತೆ ತುಂಬೆಲ್ಲಾ ಲಾರಿಯಲ್ಲಿದ್ದ ಎಂ ಸ್ಯಾಂಡ್ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಗೆ ಕಾರಣವಾಗಿದ್ದ ಲಾರಿ ಚಾಲಕ ಮಣಿಯನ್ನು ಚಿಕ್ಕಬಾಣಾವರ (Chikkabanavara) ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.








