ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಪಾಲಾಗಿರುವ ನಟ ದರ್ಶನ್ (Darshan) ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತ ಹಾಯಾಗಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಈ ಕುರಿತು ಫೋಟೋವೊಂದು ವೈರಲ್ ಆಗಿದೆ.
ನಟ ದರ್ಶನ್ ಗೆ ರಾಜಾತಿಥ್ಯ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಫೋಟೋವೊಂದು ವೈರಲ್ ಆಗಿದೆ. ಫೋಟೋದಲ್ಲಿ ದರ್ಶನ್ ಜೈಲಿನ ಬ್ಯಾರಕ್ ನಿಂದ ಹೊರಗೆ ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವುದು ಕಂಡು ಬಂದಿದೆ. ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ವಿಗ್ ಇಲ್ಲದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಜೈಲಿನ ಮೇಲೆಯೇ ಸಂಶಯ ವ್ಯಕ್ತವಾಗುತ್ತಿದೆ. ಜೈಲಿನಲ್ಲಿ ಉಳ್ಳವರಿಗೆ ಎಲ್ಲಾ ಸವಲತ್ತು ನೀಡುವ ಕಾಮಧೇನು ಎಂಬ ಮಾತು ಇತ್ತು. ಅದು ಸತ್ಯ ಇರಬಹುದು ಎಂಬ ಮಾತು ಕೇಳಿ ಬರುತ್ತಿದೆ. ದರ್ಶನ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ರನ್ನ ವಿಐಪಿ ಸೆಕ್ಯುರಿಟಿ ಸೆಲ್-1ನಲ್ಲಿ ಹಾಗೂ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು ಬ್ಯಾರಕ್ 3 ರಲ್ಲಿ ಇರಿಸಲಾಗಿದೆ. ಹೀಗಿದ್ದರೂ ಜೈಲಿನಲ್ಲಿ ಇಬ್ಬರೂ ಹೇಗೆ ಭೇಟಿಯಾದರೂ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ದರ್ಶನ್ಗೆ ಆರಂಭದಿಂದಲೂ ಜೈಲಲ್ಲಿ ರಾಜಾತೀಥ್ಯ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ. ನಾಗನೇ ದರ್ಶನ್ ರಾಜಾತಿಥ್ಯಕ್ಕೆ ಉಸ್ತುವಾರಿಯಾಗಿದ್ದಾನೆ. ಸಾಮಾನ್ಯ ಕೈದಿಗಳಿಗೆ ಒಂದು ರೀತಿಯ ಊಟ ಇದ್ದರೆ, ನಟ ದರ್ಶನ್ ಗೆ ಅಂತಾನೇ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಬಿಸಿ ನೀರು, ಮೊಟ್ಟೆ, ಹಾಲು, ಸಿಗರೇಟ್, ಮಲಗೋಕೆ ವಿಶೇಷ ಹಾಸಿಗೆ ಕೂಡ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ನಟ ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗ ಎಲ್ಲಿ ಬೇಕಾದರೂ ತಿರುಗಾಡಬಹುದು. ಕೈದಿಗಳನ್ನು ಕೂಡ ದರ್ಶನ್ ಸಹಾಯಕ್ಕೆ ನೇಮಿಸಲಾಗಿದೆ ಎಂಬ ಆರೋಪವೂ ಇದೆ. ಯಾವುದು ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.