ನವದೆಹಲಿ: ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast Case) ಪ್ರಕರಣದ ಸೂತ್ರಧಾರ ಪಾಕಿಸ್ತಾನ ಉಗ್ರ ಫರ್ಹಾತುಲ್ಲಾ ಘೋರಿ (Farhatullah Ghori) ಭಾರತದಲ್ಲಿನ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್ ಗಳಿಗೆ ಕರೆ ನೀಡಿದ್ದಾನೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕ ಹಳಿ ತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ.ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಆಧಾರಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ರೈಲುಗಳು ಅಲ್ಲದೇ ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದುಹೇಳಿದ್ದಾನೆ. ಮೂರು ವಾರಗಳ ಹಿಂದೆ ಟೆಲಿಗ್ರಾಮ್‌ನಲ್ಲಿ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಹೇಳಿವೆ ಎನ್ನಲಾಗಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (INS) ಬೆಂಬಲದೊಂದಿಗೆ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನ ರಾಮೇಶ್ವರಂಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ವಿಚಾರ ಈಗ ತನಿಖೆಯಿಂದ ತಿಳಿದು ಬಂದಿದೆ. ಫರ್ಹತುಲ್ಲಾ ಘೋರಿ, 2002 ರಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಆ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 80 ಜನರು ಗಾಯಗೊಂಡಿದ್ದರು.
2005 ರಲ್ಲಿ ಹೈದರಾಬಾದ್‌ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿಯೂ ಈ ಉಗ್ರನ ಕೈವಾಡವಿದೆ ಎನ್ನಲಾಗಿದೆ. ಮಾ.1 ರಂದುರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಜನರು ಗಾಯಗೊಂಡಿದ್ದರು.







