ನವದೆಹಲಿ: 2024ರ ಭಾರತೀಯ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಅಂಬಾನಿ ಸ್ಥಾನಕ್ಕೆ ಅದಾನಿ ಎಂಟ್ರಿ ಕೊಟ್ಟಿದ್ದಾರೆ. ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ (Gautam Adani), ಮುಕೇಶ್ ಅಂಬಾನಿ (Mukesh Ambani)ಯನ್ನು ಹಿಂದಿಕ್ಕಿದ್ದಾರೆ.
11.2 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಹಾಗೂ ಹುರುನ್ ಇಂಡಿಯಾ 2024 ಶ್ರೀಮಂತರ ಪಟ್ಟಿಯಲ್ಲಿ (Hurun India Rich List 2024) ಮುಕೇಶ್ ಅಂಬಾನಿ ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಭಾರತೀಯ ಶ್ರೀಮಂತ ಎಂಬ ಖ್ಯಾತಿ ಗಳಿಸಿದ್ದಾರೆ.
ಜು.31 ರವರೆಗಿನ ಉದ್ಯಮಿಗಳ ಸಂಪತ್ತಿನ ಲೆಕ್ಕಾಚಾರವನ್ನು ಆಧರಿಸಿ 10.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಮುಕೇಶ್ ಅಂಬಾನಿ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಭಾರತವು ಹೆಚ್ಚು ಶ್ರೀಮಂತ ವ್ಯಕ್ತಿಗಳ ರಾಷ್ಟ್ರವಾಗುತ್ತಿದೆ ಎಂದು ಈ ವರದಿ ಹೇಳಿದೆ. ಅಲ್ಲದೇ, ಚೀನಾ ಶೇ. 25ರಷ್ಟು ಶ್ರೀಮಂತಿಕೆಯ ಕುಸಿತ ಕಂಡಿದ್ದು, ಭಾರತವು ಶೇ. 29ರಷ್ಟು ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.
ಅದಾನಿ ಮತ್ತು ಅಂಬಾನಿ ನಂತರ ಮೂರನೇ ಸ್ಥಾನದಲ್ಲಿ 3.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಹೆಚ್ಸಿಎಲ್ ಟೆಕ್ನಾಲಾಜಿಸ್ನ ಶಿವ ನಡಾರ್ ಹಾಗೂ ಅವರ ಕುಟುಂಬ ಪಡೆದುಕೊಂಡಿದೆ. ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಕ್ರಮವಾಗಿ 2.89 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಸೈರಸ್ ಎಸ್ ಪೂನಾವಾಲಾ, ಅವರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ಕುಟುಂಬ ಇದೆ. 2.49 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ನ ದಿಲೀಪ್ ಶಾಂಘ್ವಿ ನಂತರದ ಸ್ಥಾನದಲ್ಲಿದ್ದಾರೆ.
7 ವರ್ಷ ಹಿಂದಿನ ಬೆಳವಣಿಗೆಯನ್ನು ಗಮನಿಸಿದಾಗ ಭಾರತ ಶ್ರೀಮಂತರ ಪಟ್ಟಿಯು ಶೇ.15.20ರಷ್ಟು ಗಣನೀಯ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ. ಅಲ್ಲದೇ, 1500 ವ್ಯಕ್ತಿಗಳು 1 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂದು ವರದಿ ಹೇಳಿದೆ.








