ರೌಡಿ ಶೀಟರ್ ವಿಕಾಸ್ ದುಬೆ ಮನೆಯನ್ನು ನೆಲಸಮಗೊಳಿಸಿದ ಜಿಲ್ಲಾಡಳಿತ
ಕಾನ್ಪುರ, ಜುಲೈ 5: ಕಾನ್ಪುರ ಜಿಲ್ಲಾಡಳಿತ ಕುಖ್ಯಾತ ರೌಡಿ ವಿಕಾಸ್ ದುಬೆ ಮನೆಯನ್ನು ನೆಲಸಮಗೊಳಿಸಿದೆ ಎಂದು ವರದಿಗಳು ತಿಳಿಸಿದೆ. ಕುಖ್ಯಾತ ರೌಡಿ ವಿಕಾಸ್ ದುಬೆ, ತನ್ನನ್ನು ಬಂಧಿಸಲು ಬಂದಿದ್ದ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ. ರೌಡಿ ಶೀಟರ್ ವಿಕಾಸ್ ದುಬೆ ಹಾಗೂ ಆತನ ಸಹಚರರು ಗುಂಡಿನ ದಾಳಿ ನಡೆಸಿ ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ. ಈ ಘಟನೆ ನಡೆದು 36 ಗಂಟೆಯ ಬಳಿಕ ಕಾನ್ಪುರ ಜಿಲ್ಲಾಡಳಿತ ಬಿಥೂರ್ಸ್ ನ ಡಿಕ್ರೂ ಗ್ರಾಮದಲ್ಲಿರುವ ದುಬೆ ಮನೆಯನ್ನು ಧ್ವಂಸಗೊಳಿಸಿದೆ ಎಂದು ವರದಿಗಳು ಹೇಳಿವೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ರೌಡಿ ಶೀಟರ್ ವಿಕಾಸ್ ದುಬೆಗೆ ತಪ್ಪಿಸಿಕೊಳ್ಳಲು ಮಾಹಿತಿ ನೀಡಿದ ಶಂಕೆಯಲ್ಲಿ ಚೌಬೇಪುರ್ ಪೊಲೀಸ್ ಠಾಣಾಧಿಕಾರಿ ವಿನಯ್ ತಿವಾರಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಚೌಬೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಡಿಕ್ರೂ ಪ್ರದೇಶದಲ್ಲಿ ವಿಕಾಸ್ ಹಾಗೂ ಆತನ ಸಹಚರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಮತ್ತು ಆತನ ಸಹಚರರನ್ನು ಬಂಧಿಸಲು ತೆರಳಿದ್ದರು. ಆ ಸಂದರ್ಭದಲ್ಲಿ 8 ಮಂದಿ ಪೊಲೀಸರಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದ. ದುಬೆ ವಿರುದ್ಧ ಕೊಲೆ, ಸುಲಿಗೆ ಸೇರಿದಂತೆ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ.








