ಚಂಡೀಗಢ: ಜಾನುವಾರು ಸಾಗಾಟ ಮಾಡುತ್ತಿದ್ದಾನೆಂದು ಭಾವಿಸಿ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ಹರಿಯಾಣದ (Haryana) ಫರಿದಾಬಾದ್ನಲ್ಲಿ ನಡೆದಿದೆ. ಆರ್ಯನ್ ಮಿಶ್ರಾ ದುಷ್ಕರ್ಮಿಗಳ ದಾಳಿಗೆ ಬಲಿಯಾದ ದುರ್ದೈವಿ. ಆಗಸ್ಟ್ 23 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು (Haryana Police) ಬಂಧಿಸಿದ್ದಾರೆ. ಬಂಧಿತರನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.
ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವರು ಜಾನುವಾರುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿದೆ. ಆಗ ಆರೋಪಿಗಳು ಕಾರಿನಲ್ಲಿ ಹೋಗುತ್ತಿದ್ದ ಆರ್ಯನ್ ಮಿಶ್ರಾ, ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ್ದಾರೆ. ನಂತರ ಕಾರು ಹಿಂಬಾಲಿಸಿದ್ದಾರೆ. ಚಾಲಕ ಹರ್ಷಿತ್ ನನ್ನು ನಿಲ್ಲಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಕಾರಿನಲ್ಲಿದ್ದ ಶಾಂಕಿ ಎಂಬಾತನಿಗೆ ಕೆಲವರ ಜೊತೆ ಗಲಾಟೆಗಳಾಗಿದ್ದು, ಅವರು ಗೂಂಡಾಗಳನ್ನು ಕಳಿಸಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಭಾವಿಸಿದ್ದರು. ಕಾರು ನಿಲ್ಲಿಸದಿದ್ದಾಗ ಆರೋಪಿಗಲು ಗುಂಡು ಹಾರಿಸಿದ್ದಾರೆ. ಅದು ಆರ್ಯನ್ ಕುತ್ತಿಗೆಗೆ ತಗುಲಿದೆ. ಆನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕೂಡಲೇ ಆರ್ಯನ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.








