ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಬ್ರುನೈ (Brunei) ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬ್ರುನೈ ದೇಶದ ಸುಲ್ತಾನ, 7 ಸಾವಿರ ಕಾರುಗಳ ಒಡೆಯ ಹಾಜಿ ಹಸನಲ್ ಬೊಲ್ಕಿಯಾ (Hassanal Bolkiah) ಮೋದಿಗೆ ಭವ್ಯ ಸ್ವಾಗತ ಕೋರಲಿದ್ದಾರೆ.
ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರುನೈ ದೇಶಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಇತಿಹಾಸದಲ್ಲಿ ಏಷ್ಯಾದ (Asia) ಆಗ್ನೇಯ ದೇಶಕ್ಕೆ ಭೇಟಿ ನೀಡುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಸಾಕ್ಷಿಯಾಗಲಿದ್ದಾರೆ. ಬ್ರುನೈ ದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಲಿರುವ ಅವರು ಉಭಯ ದೇಶಗಳ 40 ವರ್ಷಗಳ ರಾಜತಾಂತ್ರಿಕತೆ ಬಗ್ಗೆ ಚರ್ಚಿಸಲಿದ್ದಾರೆ.
ಹಸನಲ್ ಬೊಲ್ಕಿಯಾ ಅವರು ಇಂಗ್ಲೆಂಡ್ನ ರಾಣಿ 2ನೇ ಎಲಿಜಬೆತ್ ಅವರ ನಂತರ ವಿಶ್ವದಲ್ಲಿಯೇ ಅತೀ ಹೆಚ್ಚು ಆಳ್ವಿಕೆ ಮಾಡಿದ ದೊರೆಯಾಗಿದ್ದಾರೆ. ಇವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿದವರಾಗಿದ್ದು, ಆ ಎಲ್ಲ ಕಾರುಗಳ ಒಟ್ಟು ಬೆಲೆ 4,197 ಕೋಟಿ (5 ಬಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ.
ಬೊಲ್ಕಿಯಾ ಅವರ ಹತ್ತಿರ 7 ಸಾವಿರಕ್ಕಿಂತ ಹೆಚ್ಚು ಐಷರಾಮಿ ಕಾರುಗಳಿದ್ದು, ಅದರಲ್ಲಿ 6 ಸಾವಿರ ಕಾರುಗಳು ರೋಲ್ಸ್ ರಾಯ್ಸ್ ಕಾರುಗಳಾಗಿವೆ. ಇದು ಗಿನ್ನಿಸ್ ದಾಖಲೆ ಸೇರಿದೆ. ಅವರು 450 ಫೇರಾರಿ ಮತ್ತು 380 ಬೆಂಟ್ಲಿ ಹಾಗೆಯೇ ಲ್ಯಾಂಬೋರ್ಗಿನಿ, ಜಾಗ್ವಾರ್ಸ್, ಬಿಎಂಡಬ್ಯೂ, ಪೊರ್ಷಸ್, ಮೇಬ್ಯಾಕ್ಸ್, ಮೆಕ್ಲಾರೆನ್ಸ್ ಒಳಗೊಂಡಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಇವರ ಒಂದೇ ಕಾರು ಸುಮಾರು 67 ಕೋಟಿ (80 ಮಿಲಿಯನ್ ಡಾಲರ್) ಬೆಲೆ ಹೊಂದಿದೆ. ಇವರು ತಮ್ಮ ಮಗಳ ಮದುವೆಗೆ ಸಂಪೂರ್ಣ ಚಿನ್ನದ ಲೇಪನ ಮಾಡಿದ್ದ ಬಹುಕೋಟಿ ಮೌಲ್ಯದ ಕಾರನ್ನು ಗಿಫ್ಟ್ ರೂಪದಲ್ಲಿ ನೀಡಿದ್ದರು.