ಚೀನಾ-ಪಾಕ್ ಎಕನಾಮಿಕ್ ಕಾರಿಡರ್ ಮಾಡಿಯೇ ಸಿದ್ಧ – ಇಮ್ರಾನ್ ಖಾನ್ ಪ್ರತಿಜ್ಞೆ
ಇಸ್ಲಾಮಾಬಾದ್, ಜುಲೈ 5: ತಮ್ಮ ಸರ್ಕಾರವು ಚೀನಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಅನ್ನು ಏನೇ ಆದರೂ ಪೂರ್ಣಗೊಳಿಸಿಯೇ ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.
60 ಬಿಲಿಯನ್ ಯುಎಸ್ಡಿ ಯೋಜನೆಯು ಉಭಯ ದೇಶಗಳ ನಡುವಿನ ಸ್ನೇಹದ ಅಭಿವ್ಯಕ್ತಿಯಾಗಿರುವುದರಿಂದ ಏನೇ ಆದರೂ ಮಾಡಿಯೇ ತೀರುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ
ಸಿಪಿಇಸಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಖಾನ್, ಇದು ಪಾಕಿಸ್ತಾನದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಒಂದು ಅತ್ಯುತ್ತಮ ಯೋಜನೆಯಾಗಿದೆ ಮತ್ತು ಬಹು ದೊಡ್ಡ ಬಹುಮುಖಿ ಉಪಕ್ರಮವು ರಾಷ್ಟ್ರಕ್ಕೆ ಉಜ್ವಲ ಭವಿಷ್ಯವನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಸಿಪಿಇಸಿ ಪ್ರಾಧಿಕಾರದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಖಾನ್, ಅದರ ಕಾರ್ಯ ಮತ್ತು ಸಾಮರ್ಥ್ಯವನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಈ ಕಾರಿಡಾರ್ ಯೋಜನೆಯು ಪಾಕಿಸ್ತಾನ-ಚೀನಾ ಸ್ನೇಹದ ಅಭಿವ್ಯಕ್ತಿಯಾಗಿದೆ ಮತ್ತು ಸರ್ಕಾರವು ಅದನ್ನು ಯಾವುದೇ ವೆಚ್ಚದಲ್ಲಿ ಪೂರ್ಣಗೊಳಿಸುತ್ತದೆ ಎಂದು ಹೇಳಿದರು.
ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಅವರು ಸಿಪಿಇಸಿ ಯೋಜನೆಗಳನ್ನು ತಮ್ಮ ಪಾಕಿಸ್ತಾನದ ಸಹವರ್ತಿ ಶಾ ಮಹಮೂದ್ ಖುರೇಷಿ ಅವರೊಂದಿಗೆ ಫೋನ್ ಸಂಭಾಷಣೆಯಲ್ಲಿ ಚರ್ಚಿಸಿದ ಒಂದು ದಿನದ ನಂತರ ಖಾನ್ ಅವರು ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಆರ್ಥಿಕ ಚೇತರಿಕೆಗೆ ಸಹಾಯ ಮಾಡಲು ಸಿಪಿಇಸಿ ಅಡಿಯಲ್ಲಿ ಯೋಜನೆಗಳನ್ನು ವೇಗಗೊಳಿಸಲು ಉಭಯ ದೇಶಗಳಿಗೆ ವಾಂಗ್ ಕರೆ ನೀಡಿದ್ದು, ಪಾಕಿಸ್ತಾನ ಸರ್ಕಾರವು ಚೀನಾದ ಕಂಪನಿಗಳಿಗೆ ಮತ್ತು ದೇಶದಲ್ಲಿ ಕೆಲಸ ಮಾಡುವ ನಾಗರಿಕರಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ ಎಂದು ಆಶಿಸಿದರು.








