ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ಕೈಯಲ್ಲಿ ಕೊಲೆಯಾಗಿದ್ದಾರೆ ಎನ್ನಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ ನಲ್ಲಿ ಗ್ಯಾಂಗ್ ನ ಕರಾಳ ಮುಖ ಬಯಲಾಗಿದೆ.
ಕೊಲೆಯಾಗುವುದಕ್ಕೂ ಮುನ್ನ ಪಟ್ಟಣಗೆರೆ ಶೆಡ್ ನಲ್ಲಿ ಎರಡು ಲಾರಿಗಳ ಮುಂದೆ ಕುಳಿತು ರೇಣುಕಾಸ್ವಾಮಿ (Renukaswamy) ಅಂಗಲಾಚಿದ್ದಾನೆ. ಈ ವೇಳೆ ಕಿಟಕಿ, ಬಾಗಿಲಿಗೆ ಬಳಸುವ ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಪ್ರಾಣ ಹೋಗುವವರೆಗೂ ದರ್ಶನ್ (Darshan) ಮತ್ತು ಪವಿತ್ರ ಗೌಡ (Pavithra Gowda) ಶೆಡ್ ನಲ್ಲಿಯೇ ಇದ್ದರು ಎಂಬ ವಿಚಾರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು 3,991 ಪುಟ, 231 ಸಾಕ್ಷಿ, 5 ಸಂಪುಟ ಇರುವ ಚಾರ್ಜ್‌ಶೀಟ್ ನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಲಾರಿಯ ಮುಂದೆ ಬಿದ್ದಿರುವ ಶವದ ಫೋಟೋವನ್ನು ಲಗತ್ತಿಸಲಾಗಿದೆ. ಅಲ್ಲದೇ ಪೊಲೀಸ್ ಲಾಠಿ ಮುಂಬದಿ ಪುಡಿ ಪುಡಿಯಾಗಿರುವ ಫೋಟೋ, ನೈಲಾನ್ ಹಗ್ಗ, ರಿಪೀಸ್ ಪಟ್ಟಿ, ಪವಿತ್ರಾಗೌಡ ಮನೆಯಲ್ಲಿ ಸೀಜ್ ಮಾಡಿದ್ದ ಚಪ್ಪಲಿ, ನೀಲಿ ಜೀನ್ಸ್ ಮತ್ತು ಬಿಳಿ ಬಣ್ಣದ ಬನಿಯನ್ ಧರಿಸಿದ್ದ ರೇಣುಕಾಸ್ವಾಮಿ ಫೋಟೋಗಳನ್ನು ಕೂಡ ಲಗತ್ತಿಸಲಾಗಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಕುರಿತು ಮಾಹಿತಿ ನೀಡಲಾಗಿದೆ. ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆಯಾಗಿದೆ. ಪ್ರಮುಖವಾಗಿ ಎದೆಮೂಳೆ ಮುರಿತ, ತಲೆಯಲ್ಲಿ ಆಳವಾದ ಗಾಯ ಪತ್ತೆ, ವೃಷಣಕ್ಕೆ ಹಾನಿ ಮಾಡಲಾಗಿರುವ ಕುರಿತು ಉಲ್ಲೇಖಿಸಲಾಗಿದೆ.