ಗದಗ: ದೇವರ ರಥ ನಿರ್ಮಾಣಕ್ಕೆ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣ ನೀಡಿದ್ದಾರೆ.
ಈ ಘಟನೆ ರೋಣ ತಾಲೂಕಿನ ಸೋಮನಕಟ್ಟಿ (Somanakatti) ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಸರ್ಕಾರ(Congress) ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿಯನ್ನು ಜಾರಿಗೆ ತಂದಿತ್ತು. ಆದರೆ, ಇದರ ಲಾಭ ಪಡೆಯುತ್ತಿರುವ ಹಲವಾರು ಮಹಿಳೆಯರಿಗೆ ಈ ಹಣ ಆಸರೆಯಾಗಿದೆ. ಹಲವರು ಹಲವಾರು ರೀತಿಯಲ್ಲಿ ಹಣವನ್ನು ಬಳಕೆ ಮಾಡಿಕೊಂಡಿದ್ದನ್ನು ನಾವು ಕೇಳಿದ್ದೇವೆ. ಈಗ ಜಿಲ್ಲೆಯ ರೋಣ ತಾಲೂಕಿನ ಸೋಮನಕಟ್ಟಿ ಗ್ರಾಮದ ಮಹಿಳೆಯರು ತಾವು ಪಡೆದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಧಾರ್ಮಿಕ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಂಡಿದ್ದಾರೆ.
ಸೋಮನಕಟ್ಟಿ ಶರಣಬಸವೇಶ್ವರನ ನೂತನ ರಥ ನಿರ್ಮಾಣ ಮಾಡಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಹೀಗಾಗಿ ಯೋಜನೆಯಿಂದ ಬಂದ ಹಣವನ್ನು ದೇಣಿಗೆ ನೀಡಲು ಮಹಿಳೆಯರು ಮುಂದಾಗಿದ್ದಾರೆ. ಗ್ರಾಮದ ಸುಮಾರು 150ಕ್ಕೂ ಅಧಿಕ ಮಹಿಳೆಯರು ನೂತನ ರಥಕ್ಕೆ ಹಣ ನೀಡಿದ್ದು, ಲಕ್ಷಾಂತರ ರೂ. ಸಂಗ್ರಹವಾಗಿದೆ. ಜೊತೆಗೆ ಗ್ರಾಮದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳು ಒಂದು ತಿಂಗಳ ಹಣ ನೀಡುವುದಾಗಿ ತೀರ್ಮಾನಿಸಿದ್ದಾರೆ.
ಪ್ರತಿ ದಿನವೂ ಹತ್ತಾರು ಮಹಿಳೆಯರು ಹೆಸರು ನೋಂದಾಯಿಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ತಾವು ಪಡೆದ ಗೃಹಲಕ್ಷ್ಮಿ ಹಣ ನೀಡಿದಕ್ಕೆ ಗ್ರಾಮಸ್ಥರು ಸಂತೋಷಪಟ್ಟಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.