ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆ. 8ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಾರೆ.
ಸೆ. 8ರಂದು ಲಭ್ಯ ಇರುವ ಸೀಟುಗಳ ವಿವರ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 2ರಿಂದ ಸೆ.11ರವರೆಗೆ ‘ಆಯ್ಕೆ’ (Options) ಗಳನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ. ರಾಷ್ಟೀಯ ಮಟ್ಟದ ನೀಟ್ (NEET) ಫಲಿತಾಂಶ ನೋಡಿಕೊಂಡು ಎರಡನೇ ಸುತ್ತಿನ ಫಲಿತಾಂಶ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ನೀಟ್ ಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್ ಗಳನ್ನ ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಈ ಹಂತದಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾಗಿರುತ್ತದೆ. ಅಲ್ಲದೇ, ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಇಷ್ಟ ಇರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕು ಎಂದು ಹೇಳಿದ್ದಾರೆ.