ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಕೇಳಿ ಬಂದಿದ್ದ 2ನೇ ಪ್ರಕರಣದಲ್ಲಿಯೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಎಸ್ ಐಟಿ ಅಧಿಕಾರಿಗಳು 1,632 ಪುಟಗಳ ದೂಷಾರೋಪ ಪಟ್ಟಿಯನ್ನು 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2ನೇ ಪ್ರಕರಣದಲ್ಲಿ 113 ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು ಒಟ್ಟು 1,632 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಕೆ.ಆರ್. ನಗರ ತಾಲೂಕಿನ 48 ವರ್ಷದ ಸಂತ್ರಸ್ತೆ ತನ್ನ ಪತಿಯೊಂದಿಗೆ ಗನ್ನಿಕಡ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅದೇ ತೋಟದಲ್ಲಿದ್ದ ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಪ್ರಜ್ವಲ್ ರೇವಣ್ಣ ಆಗಾಗ ಈ ತೋಟಕ್ಕೆ ಬಂದು ಹೋಗುತ್ತಿದ್ದರು. 2021ರಲ್ಲಿ ಕೊರೊನಾ ಲಾಕ್ ಡೌನ್ ಗೂ ಮುನ್ನ ಈ ತೋಟಕ್ಕೆ ಬಂದು ಹೋಗಿದ್ದರು.
ಆಗ ಸಂತ್ರಸ್ತೆ ತೋಟದ ಮನೆಯಲ್ಲಿ ಒಂದನೇ ಮಹಡಿಯಲ್ಲಿನ ರೂಮ್ ಸ್ವಚ್ಛಗೊಳಿಸುತ್ತಿದ್ದಾಗ ಅವರ ಬಳಿ ಆರೋಪಿ ಹೋಗಿದ್ದಾನೆ. ಕುಡಿಯಲು ನೀರು ತರಲು ಹೇಳಿದ್ದಾನೆ. ಸಂತ್ರಸ್ತೆ ಕುಡಿಯಲು ನೀರು ಕೊಡಲು ರೂಮ್ ಗೆ ಹೋದಾಗ ಬಾಗಿಲು ಹಾಕಿದ್ದಾನೆ. ಈ ವೇಳೆ ಬಾಗಿಲು ತೆಗೆಯಣ್ಣ ಭಯವಾಗುತ್ತಿದೆ. ದಮ್ಮಯ್ಯ ಬಿಟ್ಟು ಬಿಡಣ್ಣ ಅಂತ ಸಂತ್ರಸ್ತೆ ಬೇಡಿಕೊಂಡಿದ್ದಾಳೆ.
ಆದರೂ ಬಿಡದ ಆರೋಪಿ ಆಕೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರ ಮಾಡಿದ್ದಾನೆ. ಕೃತ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ನಂತರ ಬೆಂಗಳೂರಿನ ಬಸವನಗುಡಿ ನಿವಾಸದಲ್ಲೂ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುವುದನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮೊದಲ ಚಾರ್ಜ್ ಶೀಟ್ ನ್ನು ಆಗಷ್ಟ್ 23ರಂದು ಸಲ್ಲಿಕೆ ಮಾಡಲಾಗಿತ್ತು.








