ಕಾರವಾರ: ಸಮುದ್ರದಲ್ಲಿ ಈಜಲು ಹೋಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಮೂಲದ ಪ್ರವಾಸಿಗರು ಗೋಕರ್ಣದ ಬಾವಿಕೊಡ್ಲ ಕಡಲ ತೀರದಲ್ಲಿ ಈಜಲು ಬಂದಿದ್ದಾರೆ. ಈ ವೇಳೆ ನೀರಲ್ಲಿ ಮುಳುಗಿ ಓರ್ವ ಯುವಕ ಸಾವನ್ನಪ್ಪಿದರೆ, ಐವರು ತೀವ್ರ ಅಸ್ವಸ್ಥರಾಗಿದ್ದಾರೆ. ಕೋಲಾರದ ಶ್ರೀನಿವಾಸಪುರದ ವಿನಯ ಎಸ್.ವಿ (22) ನೀರುಪಾಲಾದ ಯುವಕ ಎನ್ನಲಾಗಿದೆ. ಸದ್ಯ ಆತನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಎಲ್ಲರೂ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರೆಲ್ಲ ಬೆಂಗಳೂರಿನ ಖಾಸಗಿ ಫಾರ್ಮಸಿ ಕಾಲೇಜಿನವರು. ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮೋಜು ಮಸ್ತಿ ಮಾಡುತ್ತ ಹಲವರು ಮುಳುಗಿದ್ದಾರೆ ಎನ್ನಲಾಗಿದೆ.
ಕೂಡಲೇ ಕರಾವಳಿ ಕಾವಲು ಪೊಲೀಸ್ ಪಡೆಯವರು ಸಹಕರಿಸಿ ಹರಸಾಹಸ ಪಟ್ಟು ಒಟ್ಟು ಐವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ. ಸದ್ಯ ಅಸ್ವಸ್ಥಗೊಂಡ ಐವರು ವಿದ್ಯಾರ್ಥಿಗಳನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಸಾಗಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.