ಭೋಪಾಲ್: ಟ್ರೈನಿ ಸೇನಾ ಅಧಿಕಾರಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಗನ್ ಹಿಡಿದು ಬೆದರಿಸಿ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ ನಲ್ಲಿ (Indore) ನಡೆದಿದೆ. ಇಂದೋರ್ ಹತ್ತಿರ ಮೊವ್ ಆರ್ಮಿ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಇಬ್ಬರು ಅಧಿಕಾರಿಗಳು ಛೋಟಿ ಜಾಮ್ ನ ಫೈರಿಂಗ್ ರೇಂಜ್ ಹತ್ತಿರ ಸ್ಥಳಕ್ಕೆ ಇಬ್ಬರು ಸ್ನೇಹಿತೆಯರ ಜೊತೆ ತೆರಳಿದ್ದರು.
ಈ ಸಂದರ್ಭದಲ್ಲಿ 8 ಜನ ದುಷ್ಕರ್ಮಿಗಳು ಪಿಸ್ತೂಲ್, ಚಾಕು ಮತ್ತು ಕೋಲುಗಳನ್ನು ಹಿಡಿದು ಅಧಿಕಾರಿಗಳನ್ನು ಸುತ್ತುವರೆದಿದ್ದಾರೆ. ದಾಳಿಕೋರರು ಒಬ್ಬ ಅಧಿಕಾರಿ ಮತ್ತು ಮಹಿಳೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು 10 ಲಕ್ಷ ರೂ. ಹಣ ತರಲು ಇನ್ನೊಬ್ಬ ಅಧಿಕಾರಿ ಮತ್ತು ಮತ್ತೋರ್ವ ಮಹಿಳೆ ಕಳುಹಿಸಿ ಹಿಂಸೆ ನೀಡಿದ್ದಾರೆ.
ತರಬೇತಿ ಶಾಲೆಗೆ ಹಿಂತಿರುಗಿದ ಅಧಿಕಾರಿ ತನ್ನ ಕಮಾಂಡಿಂಗ್ ಅಧಿಕಾರಿಗೆ ಈ ವಿಚಾರ ತಿಳಿಸಿದ್ದಾರೆ. ಆನಂತರ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ತೆರಳುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.








