ಚಿಕ್ಕಮಗಳೂರು: ಸಾರಿಗೆ ಇಲಾಖೆಯ ಡಿಸಿಗೆ ಸಿಬ್ಬಂದಿಯೊಬ್ಬರು ಚಾಕು ಇರಿದಿರುವ ಘಟನೆ ನಡೆದಿದೆ.
ವರ್ಗಾವಣೆ ವಿಚಾರವಾಗಿ ಕುಟುಂಬಸ್ಥರನ್ನು ಕರೆಯಿಸಿ ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡು ಚಾಕು ಇರಿದಿದ್ದಾನೆ ಎನ್ನಲಾಗಿದೆ. ಈ ಘಟನೆ ನಗರದ ಸರ್ಕಾರಿ ಬಸ್ (KSRTC) ನಿಲ್ದಾಣದಲ್ಲಿ ನಡೆದಿದೆ.
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ವಾಹನ ಹತ್ತುವ ಸಂದರ್ಭದಲ್ಲಿ ಅಡ್ಡಗಟ್ಟಿದ ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಏಕಾಏಕಿ ಚಾಕುವಿನಿಂದ ದಾಳಿಗೆ ಮುಂದಾಗಿದ್ದಾನೆ. ಸಂದರ್ಭದಲ್ಲಿ ಅಧಿಕಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಅವರ ಕೈಗೆ ಗಾಯಗಳಾಗಿವೆ.
ಆರೋಪಿ ರಿತೀಶ್ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ ಎಂದು ಕುಟುಂಬಸ್ಥರನ್ನು ಕರೆಯಿಸಿ ಡಿಸಿ ಕೌನ್ಸಿಲಿಂಗ್ ಮಾಡಿದ್ದರು. ಕುಟುಂಬದವರ ಮನವಿ ಮೇರೆಗೆ ರಿತೇಶ್ ನನ್ನು ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ತನಗೆ ಮನೆಯವರ ಎದುರು ಅವಮಾನ ಮಾಡಿದ್ದಾರೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ.
ಗಾಯಗೊಂಡ ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ರಿತೇಶ್ ಪರಾರಿಯಾಗಿದ್ದಾನೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ (Chikkamagaluru Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.